ಕಲೆ ಅನಾವರಣಕ್ಕೆ ಸೂಕ್ತ ವೇದಿಕೆ ಮುಖ್ಯ: ಶಾಸಕ ಸೈಲ್‌

0
12
loading...

ಕನ್ನಡಮ್ಮ ಸುದ್ದಿ-ಕಾರವಾರ: ಮಕ್ಕಳಲ್ಲಿರುವ ಕಲೆಯು ಸಾಂಸ್ಕೃತಿಕ ಕಾರ್ಯಕ್ರಮಗಳಂಥ ಸೂಕ್ತ ವೇದಿಕೆ ಸಿಕ್ಕಾಗ ಮಾತ್ರ ಹೊರಜಗತ್ತಿಗೆ ಆ ಕಲೆ ಹಾಗೂ ಕಲಾವಿದನನ್ನು ಅನಾವರಣ ಮಾಡಲು ಸಹಾಯಕಎಂದು ಶಾಸಕ ಸತೀಶ ಸೈಲ್‌ ಹೇಳಿದರು.
ಅವರು ಇಲ್ಲಿಯ ಮಹಾಸತಿ ಕಲ್ಯಾಣ ಮಂಟಪದಲ್ಲಿ ಬಾಲವಿಕಾಸ ಅಕಾಡೆಮಿ, ಕಲ್ಪನಾರಶ್ಮಿ ಕಲಾ ಲೋಕ ಹಾಗೂ ಇಂದ್ರಧನುಷ್‌ ಕರಾಟೆ ಶಾಲೆಯ ಸಹಯೋಗದಲ್ಲಿ ಮೂರುದಿನಗಳ ಕಾಲ ನಡೆದ ರಾಜ್ಯ ಮಟ್ಟದ ಮಕ್ಕಳ ಸಮಗ್ರ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಈ ಸಾಂಸ್ಕೃತಿಕ ವೇದಿಕೆಯಲ್ಲಿ ನೃತ್ಯ, ಸಂಗೀತ, ಚಿತ್ರಕಲೆ, ಕರಾಟೆ, ಯೋಗ, ಭರತನಾಟ್ಯ ಹೀಗೆ ಹಲವಾರು ಕಲೆಗಳು ಒಂದೇ ವೇದಿಕೆಯ ಮೇಲೆ ನಡೆದು ಹೊರಜಗತ್ತಿಗೆ ಮಕ್ಕಳ ಕಲೆ ಸಾರಲು ಅನುಕೂಲವಾಯಿತು. ಬಾಲವಿಕಾಸ ಅಕಾಡೆಮಿ ಇಂಥ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಏರ್ಪಡಿಸಿ ಕಲಾವಿದರ ಕಲೆಗೆ ಸೂಕ್ತ ವೇದಿಕೆ ನಿರ್ಮಿಸಿಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಉಪಸಂರಕ್ಷಣಾಧಿಕಾರಿ ಮಂಜುನಾಥ ನಾವಿ, ನಗರಸಭೆಯ ಉಪಾಧ್ಯಕ್ಷೆ ಲೀಲಾಬಾಯಿ ಠಾಣೇಕರ, ಶಿವಾಜಿ ಕಾಲೇಜಿನ ಪ್ರಾಂಶುಪಾಲ ಎ.ಜಿ.ಕೆರ್ಲೆಕರ್‌ ಮುಂತಾದವರು ಇದ್ದರು.
ರಾಜ್ಯಮಟ್ಟದ ಮಕ್ಕಳ ಸಮಗ್ರ ಅಭಿವೃದ್ಧಿ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ಐದುನೂರಕ್ಕೂ ಹೆಚ್ಚು ಪ್ರತಿಭೆಗಳು ಭಾಗವಹಿಸಿದ್ದವು.

loading...