ಕಾನೂನು ಸಾಕ್ಷರತಾ ಕಾರ್ಯಕ್ರಮ

0
20
loading...

ಕನ್ನಡಮ್ಮ ಸುದ್ದಿ-ಕುಮಟಾ: ದಿನನಿತ್ಯದ ಜೀವನದಲ್ಲಿ ಮಹಿಳೆಯರು ಪ್ರಮುಖವಾದ ಪಾತ್ರವನ್ನು ವಹಿಸುತ್ತಿರುವುದರಿಂದ ಪ್ರತಿಯೊಂದು ದಿನವು ಮಹಿಳಾ ದಿನಾಚರಣೆಯೇ ಆಗಿರುತ್ತದೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಪ್ರಧಾನ ಪ್ರ.ದ.ನ್ಯಾ. ದಂಡಾಧಿಕಾರಿ ಪೂರ್ಣಿಮಾ ಎನ್‌ ಪೈ ನುಡಿದರು.
ಅವರು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕುಮಟಾ ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ದೆಶಿಸಿ ಮಾತನಾಡಿ, ಮಹಿಳೆಯರ ಬಗ್ಗೆ ಸರ್ವೊಚ್ಛ ನ್ಯಾಯಾಲಯದಿಂದ ನೀಡಲ್ಪಟ್ಟ ಕೆಲವು ತೀರ್ಪುಗಳನ್ನು ಉಲ್ಲೇಖಿಸಿ ಮಹಿಳೆಯರಿಗೆ ಕಾನೂನಿನಲ್ಲಿ ಸಿಗುವ ರಕ್ಷಣೆ ಮತ್ತು ಸೌಲಭ್ಯಗಳ ಬಗ್ಗೆ ವಿವರಿಸಿದರು.
ಸಹಾಯಕ ಸರಕಾರಿ ಅಭಿಯೋಜಕ ಮಂಜುನಾಥ ಎಚ್‌ ನಾಯ್ಕ ಮಾತನಾಡಿ, ಜೀವನ ರಥವು ಸುಗಮವಾಗಿ ಸಾಗಬೇಕಾದರೆ ಎರಡು ಚಕ್ರಗಳು ಸರಿಯಾಗಿರಬೇಕು. ಹಾಗಾಗಿ ಮಹಿಳೆಯರಿಗೆ ಕಾನೂನಿನಲ್ಲಿ ಹೆಚ್ಚಿನ ಸೌಲಭ್ಯಗಳಿದ್ದು, ಅವುಗಳನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದರು. ನ್ಯಾಯವಾದಿ ವಿದ್ಯಾ ಜೋಶಿ ಅವರು, ಮಹಿಳೆಯರ ಹಕ್ಕುಗಳು ಮತ್ತು ಸಂರಕ್ಷಣೆಯ ಬಗ್ಗೆ ಇರುವ ಕಾನೂನು ಮಾಹಿತಿಗಳ ಉಪನ್ಯಾಸ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ತಾಲೂಕಾ ಯೋಜನಾಧಿಕಾರಿ ನಾರಾಯಣ ಪಾಲನ್‌, ಕುಮಟಾ ವಕೀಲರ ಸಂಘದ ಅಧ್ಯಕ್ಷ ಆರ್‌ ಎ ಹೆಗಡೆ, ಸುಮಂಗಲಾ ಆಚಾರಿ ಹಾಗೂ ಇತರರು ಉಪಸ್ಥಿತರಿದ್ದರು.
ನ್ಯಾಯವಾದಿಗಳಾದ ಮಮತಾ ನಾಯ್ಕ ಸ್ವಾಗತಿಸಿದರು. ಲತಾ ನಿರೂಪಿಸಿದರು. ಸರೋಜ ವಂದಿಸಿದರು.

loading...