ಕಾಯಕಯೋಗಿ ಸಿದ್ಧರಾಮೇಶ್ವರರ ಜಯಂತ್ಯೋತ್ಸವ

0
28
loading...

ರಾಯಬಾಗ: ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಜಿ.ಪಂ.ಸದಸ್ಯ ಪ್ರಣಯ ಪಾಟೀಲ ಅವರು ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಿದ್ಧರಾಮೇಶ್ವರರ ಭಾವಚಿತ್ರ ಮೆರವಣಿಗೆಗೆ ಗುರುವಾರ ಚಾಲನೆ ನೀಡಿದರು. ಅಂಬೇಡ್ಕರ್‌ ವೃತ್ತದಿಂದ ಮಹಾವೀರ ಭವನದ ವರೆಗೆ ಮಹಿಳೆಯರು ಕುಂಭಮೇಳವನ್ನು ಹೊತ್ತು ಸಾಗಿದರು.
ನಂತರ ಪಟ್ಟಣದ ಮಹಾವೀರ ಭವನದಲ್ಲಿ ತಾಲೂಕ ಭೋವಿ (ವಡ್ಡರ) ಸಮಾಜವತಿಯಿಂದ ಹಮ್ಮಿಕೊಂಡಿದ್ದ ನಿಜ ಶರಣ, ಕಾಯಕಯೋಗಿ ಸಿದ್ಧರಾಮೇಶ್ವರರ 846ನೇ ಜಯಂತ್ಯೋತ್ಸವ ವೇದಿಕೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ಹಾಗೂ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಾಗಲಕೋಟೆ-ಚಿತ್ರದುರ್ಗದ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು, ಯಾವ ಸಮುದಾಯ ಶಿಕ್ಷಣದಿಂದ ದೂರವಿರುತ್ತದೆಯೊ ಆ ಸಮುದಾಯಕ್ಕೆ ನಿಜವಾದ ಸ್ವಾತಂತ್ರ್ಯ ಇಲ್ಲದಂತೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಯಾವಾಗ ಸಮಾನತೆ ಬರುತ್ತದೆಯೋ, ಆವಾಗ ನಿಜವಾದ ಸ್ವಾತಂತ್ರ್ಯ ಬರುತ್ತದೆ ಎಂದು ಅಂಬೇಡ್ಕರ್‌ ಅವರು ಹೇಳಿರುವುದು ಕಟು ಸತ್ಯವಾಗಿದೆ ಎಂದರು.
ನಮ್ಮ ಸಮುದಾಯ ಮೂಢನಂಬಿಕೆಯಿಂದ ದೂರವಾಗಿ ಜಾಗೃತರಾಗಿ ಸಂಘಟನೆ ಶಕ್ತಿ ತೋರುವವರಿಗೆ ನಮಗೆ ಯಾವುದೇ ಸರಕಾರಗಳು ಸೌಲಭ್ಯಗಳನ್ನು ನೀಡುವುದಿಲ್ಲವೆಂದು ಹೇಳಿದರು. ಜಾತ್ಯಾತೀತ ರಾಷ್ಟ್ರದಲ್ಲಿ ಎಲ್ಲಿ ಜಾತಿಯ ಕಲಹಗಳು, ಸಂಘರ್ಷಗಳು ಆಗುತ್ತದೆಯೋ, ಅದಕ್ಕೆ ಪ್ರಚೋದನೆ ಕೊಡುವುದಾದರೆ ಅಂತಹ ಸಂತರ ಹೆಸರಿನಲ್ಲಿ ಜಾತಿ ಸಮಾವೇಶಗಳು ಮಾಡುವುದು ಅವಶ್ಯಕತೆಯಿಲ್ಲವೆಂದು ಮಾರ್ಮಿಕವಾಗಿ ನುಡಿದರು. ಚಂದ್ರಶೇಖರ ಸ್ವಾಮೀಜಿ ಹಾಗೂ ಕೋಳಿಗುಡ್ಡ ಆನಂದ ಆಶ್ರಮದ ವಿಶ್ವನಾಥ ಗುರು ಯಲ್ಲಾಲಿಂಗ ಮಹಾರಾಜರು ಸಾನಿಧ್ಯವನ್ನು ವಹಿಸಿದ್ದರು. ಸಮಾಜದ ಹಿರಿಯ ಮುಖಂಡ ಪರಶುರಾಮ ವಡ್ಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಗಳಾಗಿ ತಾಲೂಕಾ ಭೋವಿ(ವಡ್ಡರ) ಸಮಾಜದ ಅಧ್ಯಕ್ಷ ಅರುಣ ವಡ್ಡರ, ಉಪಾಧ್ಯಕ್ಷ ಆನಂದ ವಡ್ಡರ, ಕಾರ್ಯದರ್ಶಿ ಭೀಮಶಿ ವಡ್ಡರ, ಸಮಾಜದ ಹಿರಿಯರಾದ ರಾಜೇಂದ್ರ ವಡ್ಡರ, ನ್ಯಾಯವಾದಿ ಎಮ್‌.ಜಿ.ಉಗಾರೆ, ಪಿ.ಟಿ.ವಾಘ, ಶಿವಪ್ರಸಾದ ಬ್ಯಾಡಗಿ, ಶಂಸಕರ ವಡ್ಡರ, ಬಸು ವಡ್ಡರ, ಅಣ್ಣಪ್ಪ ನಿಡಗುಂದಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ ಸಮಾಜದ ಬಾಂಧವರು ಪಾಲ್ಗೊಂಡಿದ್ದರು. ಎಮ್‌.ಜಿ.ಉಗಾರೆ ಸ್ವಾಗತಿಸಿದರು, ಶಿಕ್ಷಕ ಗೋಪಾಲ ಬೆಕ್ಕೇರಿ ನಿರೂಪಿಸಿ, ವಂದಿಸಿದರು.

loading...