ಕುಡಿಯುವ ನೀರು ಪೂರೈಕೆ ಆಗ್ರಹಿಸಿ ಪ್ರತಿಭಟನೆ

0
18
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ತಾಲ್ಲೂಕಿನ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಗುರುವಾರ ತಾಲ್ಲೂಕಿನ ಹಮ್ಮಿಗಿ ಗ್ರಾಮದ ನೀರು ಪೂರೈಸುವ ಪಂಪ ಹೌಸ್‌ಗೆ ಮುತ್ತಿಗೆ ಹಾಕಿ ಪಂಪ ಹೌಸ್‌ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಹಲವಾರು ಗ್ರಾಮಗಳಿಂದ ಟ್ಯಾಕ್ಟರ್ನಲ್ಲಿ ಆಗಮಿಸಿದ ಜನರು ಪಂಪಹೌಸ್‌ ಬಂದ್‌ ಮಾಡಿ ಶಾಸಕರು ಹಾಗೂ ಸಚಿವರ ವಿರುದ್ಧ ಘೋಷಣೆ ಕೂಗುತ್ತಾ ಪಂಪಹೌಸ್‌ ಮುಂದೆ ಪ್ರತಿಭನೆ ಪ್ರಾರಂಭಿಸಿದರು. ತಾಲ್ಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್‌.ಗೌಡರ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ತಾಲ್ಲೂಕಿನ ಹಮ್ಮಿಗಿ ಬ್ಯಾರೇಜಿನಿಂದ ಗದಗ ಬೆಟಗೇರಿ ಅವಳಿ ನಗರಕ್ಕೆ ನಿರಂತರವಾಗಿ ಶುದ್ಧ ಕುಡಿಯುವ ನೀರು ಪೂರೈಸುತ್ತಿದ್ದಾರೆ. ಆದರೆ ಮುಂಡರಗಿ ಹಾಗೂ ಮತ್ತಿತರ ಗ್ರಾಮಗಳ ಜನರು ಕುಡಿಯುವ ನೀರಿಲ್ಲದೆ ಪರಿತಪಿಸುತಿದ್ದಾರೆ ಎಂದು ಆರೋಪಿಸಿದರು.
ಸಿಂಗಟಾಲೂರ ಹುಲಿಗುಡ್ಡ ಏತ ನೀರಾವರಿ ಯೋಜನೆಗಾಗಿ ತಾಲ್ಲೂಕಿಒನ ರೈತರು ತಮ್ಮ ಫಲವತ್ತಾದ ಜಮೀನು ಕಳೆದುಕೊಂಡಿದ್ದಾರೆ. ಇಲ್ಲಿಯ ಜನರನ್ನು ಮರೆತು ಕೇವಲ ಗದಗ ಬೆಟಗೇರಿ ಜನರಿಗೆ ಮಾತ್ರ ಶುದ್ಧ ಕುಡಿಯುವ ನೀರು ಪೂರೈಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ತಾರತಮ್ಯ ಎಸಗುತ್ತಿದ್ದಾರೆ ಎಂದು ದೂರಿದರು. ಎಲ್ಲ ವಿಷಯಗಳಲ್ಲಿಯೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಭಾಗದ ರೈತರಿಗೆ ಹಾಗೂ ಜನರಿಗೆ ಅನ್ಯಾಯ ಮಾಡುತ್ತಲಿದ್ದಾರೆ.
ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಿಟಿ ಪಿಟಕ್ಕೆನ್ನದೆ ಕುಳಿತಿರುವುದು ತುಂಬಾ ದುರ್ದೈವದ ಸಂಗತಿಯಾಗಿದೆ ಎಂದು ವಿಷಾಧಿಸಿದರು. ಪರಸಪ್ಪ ಗುಡಚಿಹಳ್ಳಿ ಮಾತನಾಡಿ, ತುಂಗಭದ್ರಾ ನದಿಯ ನೀರನ್ನು ನಂಬಿಕೊಂಡು ರೈತರು ವಿವಿಧ ಬೆಳೆಗಳನ್ನು ಬಿತ್ತಿದ್ದಾರೆ. ಆದರೆ ಅಧಿಕಾರಿಗಳು ನದಿಗೆ ನೀರು ಹರಿಸದೆ ರೈತರಿಗೆ ಅನ್ಯಾಯ ಎಸಗುತ್ತಿದ್ದಾರೆ.
ಸಂಬಂಧಪಟ್ಟವರು ತಕ್ಷಣ ನದಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು. ನಂತರ ಸಿಪಿಐ ಮಂಜುನಾಥ ನಡುವಿನಮನಿ ಸ್ಥಳಕ್ಕಾಗಮಿಸಿ ರೈತರೊಂದಿಗೆ ಚರ್ಚಿಸಿದರು. ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಕೊಟ್ರಗೌಡ ಪಾಟೀಲ, ಮಂಜುನಾಥ ಹಂಚಿನಾಳ, ಗುಡದಪ್ಪ ದೇಸಾಯಿ, ಈರಪ್ಪ ಜೋಗುನ, ಶುರೇಶ ಹಲವಾಗಲಿನಾಗರಾಜ ಗುಡಿಮನಿ, ರಾಮಣ್ಣ ಯಾಲಕ್ಕಿ ಮೊದಲಾವರು ಹಾಜರಿದ್ದರು.

loading...