ಕೆಂಪಗೆರೆ ಕೆರೆ ತುಂಬಿದರೂ ನಿಗದ ನೀರಿನ ಬವಣೆ

0
19
loading...

ಕನ್ನಡಮ್ಮ ಸುದ್ದಿ-ನರಗುಂದ: ಸದಾಕಾಲ ನೀರಿನ ಬವಣೆಯಿಂದ ಪಟ್ಟಣದ ಜನತೆ ತೊಂದರೆ ಅನುಭವಿಸುತ್ತಲೇ ಬಂದಿದ್ದಾರೆ. ಇಂದಿಗೂ 10 ದಿನಗಳಿಗೊಮ್ಮೆ ಕುಡಿಯುವ ನೀರು ಪಟ್ಟಣದ ಜನತೆಗೆ ದೊರೆಯುತ್ತಿದೆ. ಪಟ್ಟಣದ ಕುಡಿಯುವ ನೀರಿನ ಕೆರೆ ಏಕೈಕವಾಗಿದ್ದು ಅದು ಹುಸೂರ ಬಡಾವಣೆಯ ಕೆಂಪಗೇರಿಯಲ್ಲಿದೆ. ಈ ಕಾರಣಕ್ಕಾಗಿ ಅದಕ್ಕೆ ಕೆಂಪಗೆರೆ ಕೆರೆ ಎಂದು ಹೆಸರು ಬಂದಿದೆ ಈ ಕೆರೆ 18 ಅಡಿಯಷ್ಟು ನೀರು ಪ್ರಲಪ್ರಭಾ ಕಾಲುವೆ ಮುಖಾಂತರ ಭರ್ತಿಗೊಳಿಸಿ ಜನತೆಗೆ ಕುಡಿಯಲು ನೀರು ಒದಗಿಸಲಾಗುತ್ತಿದೆ. ಆದರೆ ಕೆರೆ ಸೋರಿಕೆಯಿಂದಾಗಿ 18 ಅಡಿ ನೀರು ಕೆರೆಗೆ ಹರಿದು ಬಂದರೂ ನಾಲ್ಕು ತಿಂಗಳಿನಲ್ಲಿ ಕೆರೆ ಖಾಲಿಯಾದ ಸಂದರ್ಭಗಳು ಕಂಡು ಬಂದಿವೆ. ಹೀಗಾಗಿ ಕಳೆದ ತಿಂಗಳು ಕೆರೆ ನೀರು ಖಾಲಿಯಾದ ಸಂದರ್ಭದಲ್ಲಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಪತ್ರ ಬರೆದ ಪುರಸಭೆ ಆಡಳಿತ ಮಂಡಳಿ ಒಂದು ವಾರದ ಹಿಂದೆ ಕೆರೆಗೆ ನೀರು ಭರ್ತಿಮಾಡಿದೆ. ಇಷ್ಟಾದರೂ ನಿತ್ಯ ಪಟ್ಟಣದ ಜನತೆಗೆ ನೀರು ದೊರೆಯುತಿಲ್ಲ. 10 ದಿನಗಳಿಗೊಮ್ಮೆ ಪುರಸಭೆ ನೀರು ಒದಗಿಸುತ್ತಿದೆ.
ಸದಾಕಾಲ ನೀರಿನ ಸಮಸ್ಯೆಯಿಂದ ಪಟ್ಟಣದ ಜನತೆ ಅನೇಕ ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಸುಮಾರು 38 ಸಾವಿರದಷ್ಟು ಜನತೆ ಪಟ್ಟಣದಲ್ಲಿ ವಾಸಗೊಂಡಿದ್ದು ಕುಡಿಯುವ ನೀರು ಸರಿಯಾಗಿ ದೊರೆಯುತ್ತಿಲ್ಲವೆಂಬ ಕಾರಣದಿಂದ ಅನೇಕ ಬಾರಿ ಈ ಹಿಂದೆ ಪುರಸಭೆ ಮುಂದೆ ನೀರಿನ ಸೌಲಭ್ಯಕ್ಕಾಗಿ ಜನತೆ ಧರಣಿ ನಡೆಸಿದ್ದು ಆಗಿದೆ. ಇದ್ದ ಒಂದೇ ಒಂದು ಕುಡಿಯುವ ನೀರಿನ ಕೆರೆ ಸೋರಿಕೆಯಿಂದ ನಾಲ್ಕು ತಿಂಗಳು ಮಾತ್ರ ಆ ಕೆರೆಯಿಂದ ಜನತೆಗೆ ನೀರು ನೀಡಲಾಗುತ್ತಿದೆ. ಇದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯಾಗಬಾರದೆಂಬ ದೃಷ್ಟಿಯಿಂದ ಪಟ್ಟಣದಲ್ಲಿ 32 ಬೋರವೆಲ್‌ಗಳನ್ನು ವಿವಿಧ ಬಡಾವಣೆಗಳಲ್ಲಿ ತೆರೆಯಲಾಗಿದೆ. ಈ ಎಲ್ಲ ಬೋರವೆಲ್‌ಗಳಲ್ಲಿ ಸದಾಕಾಲ ಮೂರು ಅಥವಾ ನಾಲ್ಕು ಬೋರವೆಲ್‌ಗಳು ದುರಸ್ತಿಯಲ್ಲಿ ಇರುತ್ತವೆ. ಹೀಗಾಗಿ ನಿತ್ಯ ಕುಡಿಯುವ ನೀರಿನ ಲಭ್ಯತೆ ಪಟ್ಟಣದಲ್ಲಿ ಕಂಡು ಬರುತಿಲ್ಲ.
ಈ ಸಮಸ್ಯೆ ಒಂದೆಡೆಯಾದರೆ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಐದು ತಿಂಗಳಿನಿಂದ ನಡೆದಿದ್ದು ರಸ್ತೆಯ ಬದಿಯಲ್ಲಿಯ ವಿನಾಯಕ ನಗರ, ಸರಸ್ವತಿ ನಗರ ಹಾಗೂ ಅರ್ಬಾಣ ಮತ್ತು ಕಸಬಾ ಹಾಗೂ ಮಾರುತಿ ನಗರಗಳಲ್ಲಿ ಕಳೆದ ನಾಲ್ಕು ತಿಂಗಳಿನಿಂದ ನೀರಿನ ಭವಣೆ ಮತ್ತಷ್ಟು ತಾರಕಕ್ಕೇರಿದೆ. ವಿನಾಯಕ ನಗರದಲ್ಲಿ ನೀರಿನ ಭವಣೆಯಿಂದ ಅಲ್ಲಿಯ ಜನತೆ ಕಳೆದಒಂದು ತಿಂಗಳ ಅವಧಿಯಲ್ಲಿ ನೀರು ಒದಗುತ್ತಿಲ್ಲವೆಂದು ಮೂರು ಭಾರಿ ಪುರಸಭೆ ಆಡಳಿತ ಮಂಡಳಿ ಕಾರ್ಯವೈಖತಿಯನ್ಜು ಟೀಕಿಸಿ ರಸ್ತೆ ತಡೆನಡೆಸಿದ್ದು ಕಂಡು ಬಂದಿದ್ದರಿಂದ ಪುರಸಭೆ ತಾತ್ಕಾಲಿಕ ಸಮಸ್ಯೆ ಪರಿಹರಿಸುವುದು ಈಗಲೂ ಮುಂದುವರೆದಿದೆ. ಕಾರಣ ರಸ್ತೆ ಅಗಲೀಕರಣ ಕಾಮಗಾರಿ ನಡೆದಿದ್ದರಿಂದ ಗುತ್ತಿಗೆದಾರರು ರಸ್ತೆ ಬದಿಯಲ್ಲಿರುವ ನೀರಿನ ಪೈಪ್‌ಲೈನ್‌ಗಳಲ್ಲು ಆಗಾಗ ಕಿತ್ತು ಹಾಕುವುದರಿಂದ ನೀರಿನ ಸಮಸ್ಯೆಗೆ ಶಾಸ್ವತ ಪರಿಹಾರ ದೊರೆತಿಲ್ಲವೆಂದು ಸಾರ್ವಜನಿಕರಾದ ಹನುಮಂತ ಬಾಗಲೆ, ಯಲ್ಲಪ್ಪ ಮಣಕವಾಡ, ಜಯದತ್ತ ಸಂಗೊಳ್ಳಿ, ರಾಯಣ್ಣ ತಳವಾರ ಈರಪ್ಪ ಯರಗುಪ್ಪಿ ಅನೇಕರು ಪುರಸಭೆ ಆಡಳಿತ ಟೀಕೆ ಮಾಡುವಂತಾಗಿದೆ.
ಪುರಸಭೆ ಮುಖ್ಯಾಧಿಕಾರಿ ಎನ್‌.ಎಸ್‌. ಪೆಂಡಸೆ ವಿವರ ನೀಡಿ, ಕೆರೆಯ ನೀರು ಕಳೆದ ತಿಂಗಳು ಖಾಲಿಯಾಗಿದ್ದ ಸಂದರ್ಭದಲ್ಲಿ ತಹಸೀಲ್ದಾರರಿಗೆ ನೀರು ಒದಗಿಸಲು ನೀರಾವರಿ ಇಲಾಖೆಯ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸುವಂತೆ ಕಳೆದ ತಿಂಗಳು ವರದಿ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಾ. 3 ರಂದು ಗುರುವಾರ ಮಾ. 8 ರವರೆಗೆ ಮಲಪ್ರಭಾ ಕಾಲುವೆಯಿಂದ ನೀರು ಹರಿಸಲಾಗಿದ್ದು ಈಗಾಗಲೇ 18 ಅಡಿ ನೀರು ಕೆರೆಗೆ ಭರ್ತಿಯಾಗಿದೆ. ನಾಲ್ಕು ತಿಂಗಳುವರೆಗೆ ನೀರಿನ ಸಮಸ್ಯೆ ಇಲ್ಲ. ಇದರ ಜೊತೆಗೆ ಪಟ್ಟಣದಲ್ಲಿಯ ಬೋರವೆಲ್‌ ಮುಖಾಂತರ ನೀರು ಒದಗಿಸಲಾಗುತ್ತಿದೆ. ಹೀಗಾಗಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಂಡು ಬರುವುದಿಲ್ಲವೆಂದು ತಿಳಿಸಿದ್ದಾರೆ. ಕೆರೆಯ ನಿರ್ವಹಣೆಗಾಗಿ ಕಾವಲುಗಾರರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರಲ್ಲದೇ, ಕುಡಿಯುವ ನೀರಿನ ಕೆರೆಯಲ್ಲಿ ಎತ್ತುಗಳ ಮೈ ತೊಳೆಯುವುದು ಹಾಗೂ ಕೆರೆ ಭಾಗದಲ್ಲಿ ಗಲೀಜು ಮಾಡುವುದನ್ನು ತೆಡೆಯಲಾಗಿದೆ. ಕೆರೆ ಗಲೀಜು ಮಾಡುವ ವ್ಯಕ್ತಿಗಳನ್ನು ಬಂಧಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.

loading...