ಕೌಜಲಗಿ ಗ್ರಾಮದ ದುರ್ಗಾದೇವಿ ಜಾತ್ರೆ

0
43
loading...

ಬೆಟಗೇರಿ: ಸಮೀಪದ ಕೌಜಲಗಿ ಪಟ್ಟಣದಲ್ಲಿ ಸೋಮವಾರ ಮಾ.12 ರಿಂದ ಇಲ್ಲಿಯ ದುರ್ಗಾದೇವಿ ಜಾತ್ರಾ ಮಹೋತ್ಸವ ಅದ್ಧೂರಿಯಿಂದ ನಡೆಯುತ್ತಿದೆ. ಸೋಮವಾರ ಮಾ.12 ರಂದು ಮೊದಲ ದಿನದಂದು ದುರ್ಗಾದೇವಿ ದೇವಸ್ಥಾನವನ್ನು ತಳಿರು-ತೋರಣ, ಬಾಳೆಯ ಗಡ, ತೆಂಗಿನ ಗರಿ, ಕಬ್ಬು, ಹೂ-ಮಾಲೆಗಳಿಂದ ಅಲಂಕರಿಸಲಾಯಿತು. ದೇವಿಗೆ ವಿಶೇಷ ಪೂಜೆ-ಪುನಸ್ಕಾರ, ಅಭಿಷೇಕವನ್ನು ನೆರವೇರಿಸಲಾಯಿತು.
ಸುಮಂಗಲೆಯರೆಲ್ಲ ಆರತಿಯನೆತ್ತಿ ದೇವಿಯನ್ನು ಹಾಡಿ-ಹೊಗಳಿ ಸಂತೃಪ್ತಿ ಪಡಿಸಿದರು. ಭಕ್ತಿಯಿಂದ ನೈವೇಧ್ಯ ಸಮರ್ಪಿಸಲಾಯಿತು. ರಾತ್ರಿಯಿಡಿ ದುರ್ಗಾದೇವಿಯ ಭಕ್ತರು ಭಕ್ತಿಯಿಂದ ಗ್ರಾಮದ ಸಕಲ ದೇವತೆಗಳಿಗೆ ಚರ್ಮದ ಪಾದುಕೆಗಳನ್ನು ತಯಾರಿಸಿದರು. ಮಂಗಳವಾರ ಇಂದು ಮುಂಜಾನೆಯಿಂದ ದೇವಿಯ ಪೂಜೆ-ಪುನಸ್ಕಾರ, ಉಡಿ ತುಂಬುವ ಕಾರ್ಯಗಳು ಜರುಗಿದವು. ಅನಂತರ ಭವ್ಯ ಮೆರವಣಿಗೆಯೊಂದಿಗೆ ರಾತ್ರಿಯಿಡಿ ತಯಾರಿಸಿದ ಪಾದುಕೆಗಳನ್ನು ಸಕಲ ದೇವತೆಗಳಿಗೆ ಸಮರ್ಪಿಸುವ ಕಾರ್ಯ ಆರಂಭಗೊಂಡಿತು.
ಪಾದುಕೆ ಸಮರ್ಪಿಸುವ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಕ್ತರ ಭಂಡಾರ ಎರಚಾಟದ ಮಧ್ಯ ಸಂಭ್ರಮದಿಂದ ಸಂಚರಿಸಿತು. ಊರ ಹನಮಂತ ದೇವರು, ಉದ್ದಮ್ಮ, ಲಕ್ಷ್ಮೀದೇವಿ, ದ್ಯಾಮವ್ವದೇವಿ ಮುಂತಾದ ದೇವಸ್ಥಾನಗಳಿಗೆ ತೆರಳಿ ಇಡೀ ದಿನ ಪಾದುಕೆಗಳನ್ನು ಸಮರ್ಪಿಸುವ ವಿಶಿಷ್ಟ ಸಂಪ್ರದಾಯವನ್ನು ನೋಡಲು ದೂರ ದೂರದ ಊರುಗಳಿಂದ ಜನ ಬಂದಿದ್ದರು. ಬೀಗರು-ಬಿಜ್ಜರು ಹಲಗೆ-ಕಣಿ ವಾದ್ಯಗಳೊಂದಿಗೆ ಸಂಭ್ರಮಿಸಲು ಉತ್ಸುಕರಾಗಿದ್ದು ಕಂಡು ಬಂದಿತು. ಭಂಡಾರದಲ್ಲಿಯೇ ಮುಳುಗಿ ಹೋಗಿದ್ದ ದುರ್ಗಾದೇವಿಯ ಪೂಜಾರಿ ಕುಟುಂಬಸ್ಥರು ಮೊರದಲ್ಲಿ ಪಾದುಕೆಗಳನ್ನಿರಿಸಿ ತಲೆಯ ಮೇಲೆ ಹೊತ್ತು ತಂದು ಸಮರ್ಪಿಸುವ ದೇವಿಯ ಜಾತ್ರೆ ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುತ್ತಿರುವುದು ಕಣ್ಣಿಗೆ ಹಬ್ಬವನ್ನುಂಟುಮಾಡಿದೆ. ಯುವಕರು ಟ್ರ್ಯಾಕ್ಟರ್‍ದಲ್ಲಿ ಧ್ವನಿವರ್ಧಕ ಪೆಟ್ಟಿಗೆಗಳನ್ನಿರಿಸಕೊಂಡು ಮೆರವಣಿಗೆಯಲ್ಲಿ ಸಂಭ್ರಮಿಸಿದರು.

loading...