ಕ್ರೀಡೆಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ

0
4
loading...

ಕನ್ನಡಮ್ಮ ಸುದ್ದಿ-ಕುಮಟಾ: ನಮ್ಮ ಸುತ್ತಮುತ್ತಲೂ ಹಲವಾರು ಕ್ರೀಡಾಪಟುಗಳು ಇರುತ್ತಾರೆ. ಆದರೆ ಅವರಿಗೆ ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅವಕಾಶ ದೊರೆಯದೇ ಎಲೆಮರೆಯ ಕಾಯಿಗಳಾಗಿರುತ್ತಾರೆ. ಆದರೆ ಇಂತಹ ಪಂದ್ಯಾವಳಿಗಳು ಜರುಗಿದಾಗ ಸ್ಥಳೀಯ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ದೊರೆತಂತಾಗಿ ಅವರ ಸಾಮರ್ಥ್ಯವನ್ನು ಪ್ರದರ್ಶಿಸಲು ಸಾದ್ಯವಾಗುತ್ತದೆ ಎಂದು ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ನಾಗರಾಜ ನಾಯಕ ಅಭಿಪ್ರಾಯ ಪಟ್ಟರು.
ಅವರು ತಾಲೂಕಿನ ಗೋಕರ್ಣದ ಗೋಗರ್ಭ ಮೈದಾನದಲ್ಲಿ ಪಟ್ಟ ವಿನಾಯಕ ಫ್ರೆಂಡ್ಸ್‌ ಕ್ರಿಕೆಟರ್ಸ್‌ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಬಹುಮಾನ ವಿತರಕರಾಗಿ ಆಗಮಿಸಿ ಮಾತನಾಡಿದರು.
ಬಿಜೆಪಿ ಮುಖಂಡ ಸುಬ್ರಾಯ ವಾಳ್ಕೆ ಮಾತನಾಡಿ, ಇಂತಹ ಸಂಘಟನೆಗಳು ಕೇವಲ ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡದೇ ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಸರಕಾರದ ಯೋಜನೆಗಳನ್ನು ಬಡಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಂಕಣ ಬದ್ಧರಾಗಬೇಕು. ಆ ಮೂಲಕ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿ ಪಂ ಸದಸ್ಯ ಪ್ರದೀಪ ನಾಯಕ ದೇವರಬಾವಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆಗಳಿಂದ ಮಾನವ ಉತ್ತಮ ಆರೋಗ್ಯದೊಂದಿಗೆ ಏಕಾಗ್ರತೆಯನ್ನೂ ಪಡೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ವಿಶ್ವನಾಥ ನಾಯ್ಕ, ಬಿಜೆಪಿ ಮುಖಂಡ ವೆಂಕಟ್ರಮಣ ಕವರಿ ಹಾಗೂ ಸಂಘಟನೆಯ ಪದಾಧಿಕಾರಿಗಳು ಮತ್ತು ಊರನಾಗರಿಕರು ಉಪಸ್ಥಿತರಿದ್ದರು.

loading...