ಖಾಸಗಿ ಜಮೀನು ಸಾರ್ವಜನಿಕ ರಸ್ತೆಯನ್ನಾಗಿಸಿದ ಅಧಿಕಾರಿಗಳ ವಿರುದ್ಧ ದೂರು

0
8
loading...

ಕಾರವಾರ: ಖಾಸಗಿ ಜಮೀನನ್ನು ಸಾರ್ವಜನಿಕ ರಸ್ತೆಯನ್ನಾಗಿಸಿದ ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ನಿವೃತ್ತ ಐಜಿಪಿ ಜಯಪ್ರಕಾಶ ನಾಯಕ ತಿಳಿಸಿದರು.
ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಮಗಾದ ಅನ್ಯಾಯದ ಬಗ್ಗೆ ಮಾಹಿತಿ ನೀಡಿದ ಅವರು, ಮೂಲತಃ ಕಾರವಾರದ ನಿವಾಸಿಯಾದ ತಾನು ಪೊಲೀಸ್ ಇಲಾಖೆಯಲ್ಲಿ ಐಜಿಪಿಯಾಗಿ ನಿವೃತ್ತಿಯಾಗಿದ್ದೇನೆ. ಕಾರವಾರ ನಗರದ ಕಾರವಾರ-ಕೋಡಿಭಾಗದ ದಕ್ಷಿಣದಿಂದ ಉತ್ತರಕ್ಕೆ ಹೋಗುವ ರಸ್ತೆಯ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಎದುರು ಇರುವ ಸರ್ವೇ ನಂ. 44ಎ/ಎ ದಲ್ಲಿ ತನ್ನ ಮಾಲೀಕತ್ವದಲ್ಲಿದೆ. 2016ರಲ್ಲಿ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡಿದ ಜಿಲ್ಲಾಡಳಿತ ಕಾರವಾರ ಕೋಡಿಬಾಗ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಖಾಸಗಿ ಜಮೀನನ್ನು ರಸ್ತೆ ಅಗಲೀಕರಣಕ್ಕೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿತ್ತಿ. ಆಗ ಜಿಲ್ಲಾಡಳಿತಕ್ಕೆ ಪತ್ರ ಬರೆದು ಸೂಕ್ತ ಪರಿಹಾರ ನೀಡಿ ತಮ್ಮ ಜಮೀನನ್ನು ಯೋಜನೆಗೆ ಬಳಸಿಕೊಳ್ಳಬಹುದೆಂದು ತಿಳಿಸಿದ್ದೆ. ಆದರೆ ಇದಕ್ಕೆ ಯಾವುದೇ ಉತ್ತರ ನೀಡದ ಅಧಿಕಾರಿಗಳು ನೋಟಿಸ್ ಸಹ ನೀಡದೆ, ಪರಿಹಾರವೂ ನೀಡದೇ ಒಂದು ದಿನ ತಮ್ಮ ಖಾಸಗಿ ಜಮೀನಿನೊಳಗೆ ಅಕ್ರಮ ಪ್ರವೇಶ ಮಾಡಿ ಕಲ್ಲಿನ ಕಂಪೌಂಡ್ ಕೆಡವಿ ಎರಡು ತೆಂಗಿನ ಮರ, ಹಲಸಿನ ಮರ, ಮಾವಿನಮರವನ್ನು ಕಡಿದು ಹಾಕಿದ್ದಾರೆಂದು ಜಯಪ್ರಕಾಶ ನಾಯಕ ಆರೋಪಿಸಿದರು.

ಈ ಅಧಿಕಾರಿಗಳ ವಿರುದ್ಧ ಅಕ್ರಮಪ್ರವೇಶ, ಅಧಿಕಾರ ದುರುಪಯೋಗ, ಒಳಸಂಚು ದೂರು ದಾಖಲಿಸಿದ್ದೇನೆ. ಜಿಲ್ಲಾಡಳಿತ ಹಾಗೂ ನಗರಸಭೆಯವರ ಗುಂಡಾವರ್ತನೆಯಿಂದ ತನ್ನ ಖಾಸಗಿ ಜಮೀನಿನ ರಕ್ಷಣೆಗಾಗಿ ತನ್ನ ಜಾಗದಲ್ಲಿ ಸಿಮೆಂಟ್ ಕಂಬಗಳನ್ನು ನೆಟ್ಟಿ, ಕಬ್ಬಿಣದ ತಂತಿಯನ್ನು ಹಾಕಿ ತಮ್ಮ ಆಸ್ತಿಗೆ ರಕ್ಷಣೆ ಕಲ್ಪಿಸಿದ್ದೇನೆ. ತಮ್ಮ ಅನುಪಸ್ಥಿತಿಯಲ್ಲಿ ಆಸ್ತಿಗೆ ಸೂಕ್ತ ರಕ್ಷಣೆ ಕಲ್ಪಿಸಬೇಕು ಎಂದು ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಕೋರಿದ್ದೇನೆ. ಒಂದೊಮ್ಮೆ ತಮ್ಮ ಆಸ್ತಿಗೆ ಹಾನಿಯಾದರೇ ಪೊಲೀಸರೇ ಹೊಣೆಗಾರರು ಎಂದು ಜಯಪ್ರಕಾಶ ನಾಯಕ ಎಚ್ಚರಿಸಿದ್ದಾರೆ.

loading...