ಗಂಗಾವತಿಯಲ್ಲಿ ಕಮಲ ಅರಳುವದು ಖಚಿತ : ಸಿಂಗನಾಳ

0
31
loading...

ಕನ್ನಡಮ್ಮ ಸುದ್ದಿ-ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರ ಸಹಿತ ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಕಮಲ ಅರಳುವದು ಖಚಿತ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿಂಗನಾಳ ವಿರುಪಾಕ್ಷಪ್ಪ ತಿಳಿಸಿದರು.
ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ನಡೆದ ಕಮಲ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿಯವರು ಬಿಜೆಪಿಯಿಂದ ಸ್ಪರ್ದಿಸಲಿದ್ದಾರೆ ಎಂದು ಹೇಳಿದರು.
ಮಾ.2,3,4 ಮೂರು ದಿನಗಳ ಕಾಲ ತಮ್ಮ ಪಕ್ಷವು ಕಮಲ ಜಾತ್ರೆಯನ್ನು ಹಮ್ಮಿಕೊಂಡಿದೆ. ಜುಲಾಯಿ ನಗರದಲ್ಲಿರುವ ಜನತಾ ಸೇವಾ ಶಿಕ್ಷಣ ಸಂಸ್ಥೆಯ ಮುಂದಿನ ಆವರಣದಲ್ಲಿ(ಕೊಂಕತಿ ಕಾಳಪ್ಪನವರ ನಿವೇಶನ) ಈ ಜಾತ್ರೆಯನ್ನು ಹಮ್ಮಿಕೊಂಡಿದೆ. ಈ ಜಾತ್ರೆಯಲ್ಲಿ ಸುಮಾರು 40 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಇದರಲ್ಲಿ ಕೇಂದ್ರ ಸರಕಾರದ ಸಾಧನೆಗಳು, ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆಗೊಳಿಸಿರುವ ಯೋಜನೆಗಳ ರೂಪಕಗಳನ್ನು ಪ್ರದರ್ಶಿಸಲಾಗುವದು ಎಂದು ಹೇಳಿದರು.
ಈ ಜಾತ್ರೆಯನ್ನು ಪ್ರಥಮ ಬಾರಿಗೆ ಉತ್ತರ ಪ್ರದೇಶ, ಗುಜರಾತ್‌ ರಾಜ್ಯಗಳಲ್ಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದು ಯಶ ಕಂಡಿರುವ ಕಾರಣದಿಂದ ರಾಜ್ಯದಲ್ಲಿ ತಮ್ಮ ಪಕ್ಷದ ಮುಖಂಡರು ಪ್ರಯೋಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಮಹಿಳೆಯರಿಗೆ ಸ್ಪರ್ಧೆಗಳು: ಈ ಜಾತ್ರೆಯಲ್ಲಿ ವಿಶೇಷವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ದೆ, ಮೇಹಂದಿ ಸ್ಪರ್ದೆ ಏರ್ಪಡಿಸಲಾಗಿದೆ. ಪುರುಷರಿಗೆ ಬುದ್ದಿಮಟ್ಟವನ್ನು ಹೆಚ್ಚಿಸುವ ಮೋಜಿನ ಆಟಗಳು, ಗೊಂಬೆಗಳ ಪ್ರದರ್ಶನ, ಉತ್ತರ ಭಾರತದ ತಿಂಡಿ ತಿನಿಸು, ರುಚಿಕಟ್ಟಾದ ಊಟ ಇರುತ್ತದೆ. ಜಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಚಹಾ ಮಾತ್ರ ಉಚಿತ ಇರುತ್ತದೆ. ತಿಂಡಿ ತಿನಿಸು ಮತ್ತು ಊಟ ಮಾರುಕಟ್ಟೆಗಿಂತ ಅರ್ಧ ಬೆಲೆಗೆ ಲಭ್ಯ ಇರುತ್ತದೆ ಎಂದು ಹೇಳಿದರು. ಕಮಲ ಜಾತ್ರೆಯು ಕೊಪ್ಪಳ ಜಿಲ್ಲೆಯಲ್ಲಿ ಈ ವಿಧಾನಸಭಾ ಕ್ಷೇತ್ರ ಆಯ್ಕೆಗೊಂಡಿದೆ ಎಂದು ಹೇಳಿದರು.
ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಮಾತನಾಡಿ ಕಮಲ ಜಾತ್ರೆಯನ್ನು ಉದ್ಘಾಟಿಸಲು ಬಳ್ಳಾರಿ ಸಂಸದ ಶ್ರೀರಾಮುಲು ಅವರಿಗೆ ಆಹ್ವಾನ ನೀಡಿದ್ದೇವೆ ಎಂದು ತಿಳಿಸಿದರು. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು. ಪಕ್ಷದ ನಗರ ಮಂಡಲ ಅಧ್ಯಕ್ಷ ವೀರೇಶ ಬಲ್ಕುಂದಿ, ಸೈಯದ್‌ ಅಲಿ, ಪರಶುರಾಮ ಮಡ್ಡೇರ, ವಿಠಲಾಪುರ ಯಮನಪ್ಪ ಇತರ ಮುಖಂಡರು ಪಾಲ್ಗೊಂಡಿದ್ದರು.

loading...