ಗುತ್ತಿಗೆದಾರರ ವಿಳಂಬ ನೀತಿ-ಆಮೆಗತಿಯಲ್ಲಿ ಕಟ್ಟಡ ಕಾಮಗಾರಿ

0
10
loading...

ನರಗುಂದ: ನರಗುಂದ ಪುರಸಭೆ ನೂತನ ಕಟ್ಟಡ ಕಾಮಗಾರಿ ನಿಗದಿತ ಹನ್ನೊಂದು ತಿಂಗಳ ಅವಧಿಯಲ್ಲಿ ಮುಕ್ತಾಯಗೊಳ್ಳಬೇಕಿದ್ದು ಗುತ್ತಿಗೆದಾರರ ವಿಳಂಬ ನೀತಿಯಿಂದ ಹಳೇ ಕಟ್ಟಡ ತೆರವುಗೊಳಿಸುವುದರಲ್ಲಿಯೇ ಸಮಯ ವ್ಯರ್ಥವಾಗಿ ನಿಗದಿತ ಅವಧಿಯಲ್ಲಿ ಕಟ್ಟಡ ಪೂರ್ಣಗೊಳ್ಳುವುದು ಅನುಮಾನವೆಂದು ಸಾರ್ವಜನಿಕರ ಟೀಕೆಗಳು ಕೇಳಿ ಬರುತ್ತಲಿವೆ.
ಬಾಬಾಸಾಹೇಬ ಭಾವೆ ಅರಮನೆಯನ್ನೇ ಇದುವರೆಗೂ ಪುರಸಭೆ ಕಾರ್ಯಾಲಯವನ್ನಾಗಿ ಮಾಡಿಕೊಳ್ಳಲಾಗಿತ್ತು. ಕಟ್ಟಡ ಚಿಕ್ಕದಾಗಿದ್ದರಿಂದ ಹಾಗೂ ಬಾಬಾಸಾಹೇಬ ಅವರ ಸ್ಮಾರಕಭವನ ಆಸ್ಥಳದಲ್ಲಿ ಮಾಡುವ ಉದ್ದೇಶಿತ ಸಾರ್ವಜನಿಕರಿಂದ ಬಂದ ಆಗ್ರಹದ ಮೇರೆಗೆ ಸಧ್ಯ ಪುರಸಭೆಗೆ ಹೊಸ ಕಟ್ಟಡ ಮಾಡಲು ಸಿದ್ದತೆ ತೆಗೆದುಕೊಳ್ಳಲಾಗಿದೆ. ಪುರಸಭೆ ಆಡಳಿತ ವ್ಯವಸ್ಥೆಗಾಗಿ ಹೊಸ ಕಟ್ಟಡ ಮಾಡಬೇಕೆಂದು ಕಳೆದ ಆರು ತಿಂಗಳ ಹಿಂದೆಯೇ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು.
ಈಗಿದ್ದ ತಹಸೀಲ್ದಾರ ಹಳೆ ಕಟ್ಟಡವನ್ನು ತೆರವುಗೊಳಿಸಿ ಹೊಸದಾಗಿ ಅಲ್ಲಿ ಪುರಸಭೆ ಸುಸಜ್ಜಿತ ಕಟ್ಟಡ ನಿರ್ಮೀಸಬೇಕೆನ್ನುವ ನಿರ್ಣಯ ಪುರಸಭೆಯಿಂದ ನಿರ್ಣಯಗೊಂಡಿತ್ತು. 5.14 ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಬೇಕಿದೆ. 1 ಎಕರೆ 2 ಘುಂಟೆ ಜಾಗೆಯನ್ನು ಗುರುತಿಸಿ ಅಲ್ಲಿ ಮೊದಲಿದ್ದ ತಹಸೀಲ್ದಾರ ಕಟ್ಟಡ ನೆಲಸಮಗೊಳಿಸಲು ಹಾಗೂ ಹೊಸ ಕಟ್ಟಡ ನಿರ್ಮಾಣ ಕುರಿತು ಪುರಸಭೆ ಟೆಂಡರ್‌ ಕರೆದು ಪ್ರೈಮ್‌ ಇನಫ್ರಾಸ್ಟಕ್ಚರ್‌ ಲಿ. ಮುಂಬೈ ಇವರಿಗೆ ಗುತ್ತಿಗೆ ನೀಡಿದೆ. ಆದರೆ ಕಟ್ಡಡ ತೆರವುಗೊಳಿಸಲು ಕಳೆದ ಡಿಸೆಂಬರ್‌ದಲ್ಲಿಯೇ ಕಾರ್ಯಕೈಗೊಂಡ ಗುತ್ತಿಗೆದಾರರು ಇನ್ನು ಹಳೆ ಕಟ್ಟಡ ತೆರವುಗೊಳಿಸುವ ಕಾರ್ಯದಲ್ಲಿಯೇ ವಿಳಂಭ ನೀತಿ ಅನುಸರಿಸಿದ್ದರಿಂದ ಇನ್ನು 9 ತಿಂಗಳಿನಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಯಾವ ಲಕ್ಷಣಗಳು ಕಾಣುತಿಲ್ಲವೆಂದು ಸಾರ್ವಜನಿಕರ ಟೀಕೆಗಳು ಉದ್ಬವಿಸಿವೆ.
ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಎನ್‌.ಎಸ್‌. ಪೆಂಡಸೆ ವಿವರ ನೀಡಿ, ಕಳೆದ ಆರು ತಿಂಗಳ ಹಿಂದೆ ಪುರಸಭೆ ಆಡಳಿತ ಕಚೇರಿ ಹೊಸ ಕಟ್ಟಡ ನಿರ್ಮಾಣಗೊಳಿಸಲು ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯಕೈಗೊಂಡಿದ್ದರಿಂದ ಟೆಂಡರ್‌ ಕರೆದು ಗುತ್ತಿಗೆದಾರರಿಗೆ ಕಾಮಗಾರಿಯನ್ನು ಡಿಸೆಂಬರ್‌ದಲ್ಲಿ ನೀಡಲಾಗಿತ್ತು. ಆದರೆ ಗುತ್ತಿಗೆದಾರರು ಆಮೇಗತಿಯಲ್ಲಿ ಕಾಮಗಾರಿ ನಡೆಸಿದ್ದರಿಂದ ಹಾಗೂ ಸಾರ್ವಜನಿಕರಿಂದ ಅನೇಕ ದೂರುಗಳು ಬಂದ ಪರಿಣಾಮ ಗುತ್ತಿಗೆದಾರರಿಗೆ ನಿಗಧಿತ ಅವಧಿಯಲ್ಲಿ ಕಟ್ಟಡ ಕಾಮಗಾರಿ ಪುರ್ಣಗೊಳಿಸಲು ಸೂಚಿಸಲಾಗಿದೆ.
ಪುರಸಭೆ ಎಸ್‌ಎಫ್‌ಸಿ ಬಾಕಿ ಉಳಿದಿರುವ ಅನುದಾನದ 1.50 ಕೋಟಿ ಹಾಗೂ 13 ಹಾಗೂ 14 ನೇ ಸಾಲಿನ ಅಭಿವೃದ್ದಿ ಕಾಮಗಾರಿ ಹಂಚಿಕೆಯ ಉಳಿತಾಯದ ಅನುದಾನದ 2.33 ಕೋಟಿ ರೂ ಹಾಗೂ ಇನ್ನಿತರ ಅನುದಾನದ ಒಟ್ಟು 5.44 ಕೋಟಿ ರೂ ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಬೇಸ್‌ಮೆಂಟ್‌ ಲೇವಲ್‌ ಹಾಗೂ ಮೇಲ್ಬಾಗದಲ್ಲಿ ಎರಡು ಅಂತಸ್ತು ಕಟ್ಟಡ ನಿರ್ಮಾಣಗೊಳ್ಳಬೇಕಿದೆ. ಗುತ್ತಿಗೆದಾರರು ನೀಡಿದ ಅವಧಿಯಲ್ಲಿ ಕಟ್ಟಡ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

loading...