ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡುವಂತೆ: ಡಿಸಿ ಬೊಮ್ಮನಹಳ್ಳಿ ಸೂಚನೆ

0
22
loading...

ಕನ್ನಡಮ್ಮ ಸುದ್ದಿ – ಧಾರವಾಡ: ಶೀಘ್ರದಲ್ಲಿಯೇ ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗಳು ನಡೆಯಲಿರುವುದರಿಂದ ಚುನಾವಣಾ ನೀತಿ ಸಂಹಿತೆ ಪಾಲನೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಚುನಾವಣಾ ಕಾರ್ಯ ನಿರ್ವಹಣೆಗಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ಕೂಡಲೇ ವಿವಿಧ ತಂಡಗಳನ್ನು ರಚಿಸಿ, ಸಂಪೂರ್ಣವಾಗಿ ಕಾರ್ಯ ಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣಾ ಪೂರ್ವ ತಯಾರಿ ಕುರಿತು ಏರ್ಪಡಿಸಲಾಗಿದ್ದ ಜಿಲ್ಲೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಲೋಕೋಪಯೋಗಿ, ಪಂಚಾಯತ್‌ ರಾಜ್‌, ಇಂಜಿನಿಯರ್‌ ವಿಭಾಗ, ಕೆಆರ್‌ ಡಿಸಿಎಲ್‌ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ನಡೆಯುತ್ತಿರುವ ಕಾಮಗಾರಿಗಳು ಯಾವ ಹಂತದಲ್ಲಿವೆ ಎಂಬ ವಿವರವಾದ ಮಾಹಿತಿಯನ್ನು ಮಾರ್ಚ 31 ರ ಅಂತ್ಯದವರೆಗೆ ಸಿದ್ಧಪಡಿಸಿ, ಏಪ್ರಿಲ್‌ 1 ರಂದು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಸಾಫ್ಟ್‌ ಮತ್ತು ಹಾರ್ಡ್‌ ಕಾಪಿಯೊಂದಿಗೆ ಸಲ್ಲಿಸಬೇಕು. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ತಲಾ ನಾಲ್ಕರಂತೆ ಮಾಸ್ಟರ್‌ ಟ್ರೈನರ್‌ ಗಳ ತಂಡವನ್ನು ರಚಿಸಿ ಚುನಾವಣಾ ಸಿಬ್ಬಂದಿಗೆ ತರಬೇತಿ ಏರ್ಪಡಿಸಬೇಕು ಎಂದರು.
ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಸ್ವೀಪ್‌ ಚಟುವಟಿಕೆಗಳಿಗೆ ಸಕ್ರಿಯವಾಗಿ ಭಾಗವಹಿಸಬೇಕು. ಮತದಾರರ. ನೋಂದಣಿಗೆ ಬರುವ ಅರ್ಜಿಗಳನ್ನು ಸ್ವೀಕರಿಸಬೇಕು ಎಂದರು. ಚುನಾವಣಾ ಖರ್ಚು ವೆಚ್ಚದ ನಿಗಾ ಕುರಿತು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾದ ಜೆ.ಉದಯಶಂಕರ್‌, ಅಬಕಾರಿ ಇಲಾಖೆಯ ಕಾರ್ಯ ಚಟುವಟಿಕೆ ಕುರಿತು ನೋಡಲ್‌ ಅಧಿಕಾರಿ ಅಬಕಾರಿ ಜಿಲ್ಲಾ ಅಧಿಕಾರಿ ಬಿ.ಆರ್‌.ಹಿರೇಮಠ, ಮಾಧ್ಯಮ ಸಂಬಂಧ ಚಟುವಟಿಕೆಗಳು ಹಾಗೂ ಪಾವತಿ ಸುದ್ಧಿ ನಿಗಾವಣೆ ಕುರಿತು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ರಚಿಸಬೇಕಾದ ಸಮಿತಿಗಳ ವಿವರಗಳನ್ನು ಸಭೆಗೆ ಒದಗಿಸಿದರು. ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಕೋನರಡ್ಡಿ,ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿರಿಯ ಉಪನಿರ್ದೇಶಕ ಸದಾಶಿವ ಮರ್ಜಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲ ತಹಶೀಲ್ದಾರರು, ತಾಲ್ಲೂಕು ಪಂಚಾಯತ್‌ ಕಾರ್ಯ ನಿರ್ವಹಣಾ ಅಧಿಕಾರಿಗಳು ಉಪಸ್ಥಿತರಿದ್ದರು.

loading...