ಜೀವಜಲಕ್ಕೆ ಪರಿತಪಿಸುತ್ತಿರುವ ಮುರ್ಕವಾಡ

0
27
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಗ್ರಾಮ ಪಂಚಾಯತ ಕೇಂದ್ರವಾಗಿದ್ದು, ದೊಡ್ಡ ಗ್ರಾಮ ಎನಿಸಿಕೊಂಡಿರುವ ಮುರ್ಕವಾಡವು ಜೀವಜಲಕ್ಕೆ ಅಕ್ಷರಶಃ ಪರಿತಪಿಸುತ್ತಿದೆ. ಸ್ಥಳೀಯ ಗ್ರಾಮ ಪಂಚಾಯತಿಯು ಜನರ ಮೂಲಭೂತ ಅವಶ್ಯಕತೆಯಾದ ನೀರನ್ನು ನೀಡಲು ಹರಸಾಹಸ ಪಡುತ್ತಿದೆ.

ಅಂದಾಜು 3 ಸಾವಿರ ಜನಸಂಖ್ಯೆ ಹೊಂದಿರುವ ಮುರ್ಕವಾಡದ ಗ್ರಾಮಸ್ಥರ ಜಲದಾಹವನ್ನು ತಣಿಸ ಬೇಕಾಗಿದ್ದ ಕೊಳವೆಬಾವಿಗಳು ನೀರಿನ ಅಲಭ್ಯತೆಯ ಕಾರಣ ನಿಷ್ಪ್ರಯೋಜಕವಾಗಿವೆ. ಈ ಕಾರಣ ಮನೆಗಳಿಗೆ ಸಂಪರ್ಕ ನೀಡಲಾಗಿದ್ದ ಅಂದಾಜು ಸಾವಿರ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಅಲ್ಲಲ್ಲಿ ಸಾರ್ವಜನಿಕರ ಬಳಕೆಗೆ ಸಾಮೂಹಿಕ ನೀರಿನ ತೊಟ್ಟಿಗಳನ್ನು ಮಾಡಲಾಗಿದೆಯಾದರೂ ಗ್ರಾಮಸ್ಥರು ಕುಡಿಯಲು ಹಾಗೂ ಸ್ನಾನಾದಿ ಶೌಚಕರ್ಮಗಳಿಗೆ, ಅಡುಗೆ ಮಾಡಲು, ಬಟ್ಟೆ ತೊಳೆಯಲು ಮೊದಲಾದ ಬಳಕೆಗಳಿಗೆ ಅವಶ್ಯಕ ಪ್ರಮಾಣದ ನೀರು ದೊರೆಯುತ್ತಿಲ್ಲ.
ಹಲವು ಕುಟುಂಬಗಳು ಊರ ಹೊರವಲಯದಲ್ಲಿ ತಮ್ಮ ಗದ್ದೆಯಲ್ಲಿರುವ ತೋಟದ ಮನೆಗೆ ಸ್ಥಳಾಂತರಿಸಿಕೊಂಡು ಅಲ್ಲಿ ತಮ್ಮ ಗದ್ದೆಯಲ್ಲಿನ ಕೊಳವೆಬಾವಿಯ ನೀರಾವರಿ ನೀರನ್ನು ಅವಲಂಬಿಸಿವೆ.

ಕೆಲವು ಜನರು ಸೈಕಲ್‍ಗಳ ಮೇಲೆ, ಮೋಟರ್‍ಸೈಕಲ್‍ಗಳ ಮೇಲೆ ಕೊಡಗಳನ್ನು ಹೇರಿ ಗದ್ದೆಯಲ್ಲಿನ ಬೋರವೆಲ್ ನೀರನ್ನು ಮನೆಗಳಿಗೆ ಕೊಂಡೊಯ್ಯುತ್ತಿರುವುದು ಕಂಡು ಬರುತ್ತಿದೆ.
ಮುರ್ಕವಾಡ ಗ್ರಾಮದ ಭಾಗದಲ್ಲಿರುವ ಕೆರೆ ಸುತ್ತಮುತ್ತಲು ಮಳೆ ಸೂಕ್ತ ಪ್ರಮಾಣದಲ್ಲಿ ಧರೆಗಿಳಿಯದೇ ಇದ್ದ ಕಾರಣ ಕೆರೆಯು ನೀರಿಲ್ಲದೇ ಭಣಗುಡುತ್ತಿದೆ. ಇದರ ಪರಿಣಾಮ ಅಂತರ್ಜಲ ಪಾತಾಳಕ್ಕಿಳಿದಿದ್ದು ಗ್ರಾಮಕ್ಕೆ ನೀರು ಸರಬರಾಜು ಮಾಡುವ ಕೊಳವೆಬಾವಿಗಳಲ್ಲಿ ನೀರು ಅಲಭ್ಯವಾಗಿದೆ. ಕಳೆದ ವರ್ಷವೂ ಬಂದೊದಗಿದ್ದ ಈ ಸಮಸ್ಯೆ ಮತ್ತೆ ಬಂದಿದ್ದು ಸ್ಥಳೀಯ ಗ್ರಾಮ ಪಂಚಾಯತಿ ಹಾಗೂ ತಾಲೂಕಾ ನೀರು ಸರಬರಾಜು ಇಲಾಖೆಯು ಅಲ್ಲಿನ ನೀರಿನ ಬವಣೆಯನ್ನು ನೀಗಿಸುವಲ್ಲಿ ಶೀಘ್ರ ಸಮರೋಪಾದಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಕಳೆದ ವರ್ಷದಂತೆ ಪ್ರಸಕ್ತ ವರ್ಷವೂ ಸಹ ತಾಲೂಕಾಡಳಿತದಿಂದ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಅವರು ಟ್ಯಾಂಕರ್ ಮೂಲಕ ಮುರ್ಕವಾಡಕ್ಕೆ ನಿತ್ಯ ನೀರು ಸರಬರಾಜು ಮಾಡುತ್ತಿದ್ದರು. ಪ್ರಸಕ್ತ ವರ್ಷವೂ ಸಹ ಆ ವ್ಯವಸ್ಥೆ ಮುಂದುವರಿಸುವ ಅಗತ್ಯವಿದೆ. ಜೊತೆಗೆ ಇತರ ಜನಪರ ಸಂಘ-ಸಂಸ್ಥೆಗಳು, ಕೈಗಾರಿಕೆ ವತಿಯಿಂದಲೂ ಸಹ ಜಲದಾಹದಿಂದ ಬಳಲುತ್ತಿರುವ ಮುರ್ಕವಾಡದ ಜನರಿಗೆ ಜೀವಜಲ ಪೂರೈಸುವ ಕೆಲಸ ಮಾಡುವ ತುರ್ತು ಅಗತ್ಯವಿದೆ.

loading...