ಜೆಡಿಎಸ್‌ನಲ್ಲಿ ಗರಿಗೆದರಿದ ಚುನಾವಣೆ ಚಟುವಟಿಕೆ

0
20
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಜೆಡಿಎಸ್‌ ಪಕ್ಷದ ಅಭ್ಯರ್ಥಿ ಎಂದು ಘೋಷಿತರಾಗಿರುವ ಕೆ.ಆರ್‌. ರಮೇಶ್‌ ರವರು ಚುನಾವಣಾ ತಯಾರಿ ನಡೆಸಿದ್ದು ತಮ್ಮ ಬೆಂಬಲಿಗರ ಮೂಲಕ ಪಕ್ಷದ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ. ತಮಗೆ ಪಕ್ಷದ ಟಿಕೇಟ್‌ ಸಿಗುವುದು ಖಾತ್ರಿ ಎಂದುಕೊಂಡ ನಂತರ ಹೆಚ್ಚು ಕ್ರಿಯಾಶೀಲರಾಗಿರುವ ಇವರು ತಮ್ಮ ಬೆಂಬಲಿಗರ ಪಡೆಯೊಂದಿಗೆ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಮಾ. 15 ರಂದು ಹಳಿಯಾಳಕ್ಕೆ ಆಗಮಿಸಲಿದ್ದು ಅಂದು ವಿಧಾನಸಭಾ ಕ್ಷೇತ್ರ ಕಾರ್ಯಕರ್ತರ ಸಮ್ಮೇಳನವನ್ನು ಆಯೋಜಿಸಲಾಗಿದೆ. ಅಂದು ಕುಮಾರಸ್ವಾಮಿ ಎದುರು ತಮ್ಮ ಬೆಂಬಲದ ಶಕ್ತಿ ಪ್ರದರ್ಶನವನ್ನು ಮಾಡಲಿರುವ ರಮೇಶ್‌ರವರು ಈ ಭಾಗದಲ್ಲಿ ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಬಗೆಗೆ ಇರುವ ಒಲವನ್ನು ತಮ್ಮತ್ತ ಸೆಳೆಯುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎನ್ನಬಹುದಾಗಿದೆ.
ಕಳೆದ ಏಳೆಂಟು ವರ್ಷಗಳಿಂದ ಕೆ.ಆರ್‌.ರಮೇಶ್‌ ರವರು ಈ ಭಾಗದಲ್ಲಿ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ತಾವು ಸರ್ವಾಧ್ಯಕ್ಷರಾಗಿರುವ ಕರುನಾಡ ಸುವರ್ಣ ವೇದಿಕೆ ಹೆಸರಿನಲ್ಲಿ ಕ್ಷೇತ್ರಾದ್ಯಂತ ಮಹಿಳಾ ಸಂಘಗಳನ್ನು ರಚಿಸಿದ್ದಾರೆ. ಇವರು ಪಕ್ಷಕ್ಕಿಂತ ವ್ಯಕ್ತಿಯಾಗಿ ತಮ್ಮ ಪರಿಚಯ ಇಟ್ಟುಕೊಂಡಿದ್ದು ಜೆಡಿಎಸ್‌ ಅಭ್ಯರ್ಥಿಯಾದ ನಂತರ ಅವರಿಗೆ ಪಕ್ಷದ ಗುರುತು ದೊರೆತಂತಾಗಿದೆ. ರಾಜ್ಯಕ್ಕೆ ಕುಮಾರಣ್ಣ; ಕ್ಷೇತ್ರಕ್ಕೆ ರಮೇಶಣ್ಣ ಎಂಬ ಘೋಷವಾಕ್ಯದೊಂದಿಗೆ ರಮೇಶ್‌ ಬೆಂಬಲಿಗರು ಚುನಾವಣಾ ಪೂರ್ವ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

loading...