ತಳವಾರ ಸಮುದಾಯಕ್ಕೆ ಕೇಂದ್ರದಿಂದ ಎಸ್‌ಟಿ ಮೀಸಲು: ಸಂಭ್ರಮ

0
18
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ಕೇಂದ್ರ ಸರಕಾರವು ತಳವಾರ ಮತ್ತು ಪರಿವಾರ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸಿದ್ದು, ಕೇಂದ್ರ ಸರಕಾರವು ಉದ್ಯೋಗ ಹಾಗೂ ಶಿಕ್ಷಣದಲ್ಲಿ ಎಸ್‌ಟಿ ಜನಾಂಗಕ್ಕೆ ನೀಡುವ ಎಲ್ಲ ಸೌಲಭ್ಯಗಳನ್ನು ರಾಜ್ಯ ಸರಕಾರವೂ ನೀಡಬೇಕು ಎಂದು ತಾಲ್ಲೂಕು ವಾಲ್ಮಿಕಿ ಸಮಾಜದ ಮುಖಂಡ ಬಿ.ಎಫ್‌.ಈಟಿ ಮನವಿ ಮಾಡಿಕೊಂಡರು.
ತಾಲ್ಲೂಕು ವಾಲ್ಮಿಕಿ ಸಮಾಜದ ಕಾರ್ಯಕರ್ತರು ಶುಕ್ರವಾರ ಪಟ್ಟಣದ ವಾಲ್ಮಿಕಿ ಭವದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಳವಾರ ಮತ್ತು ಪರಿವಾರ ಸಮಾಜವನ್ನು ಎಸ್‌ಟಿ ವರ್ಗಕ್ಕೆ ಸೇರಿಸುವ ಕುರಿತಂತೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಯನ್ನು ಕೇಂದ್ರ ಸರಕಾರ ಬಗೆಹರಿಸಿರುವುದು ಸಂತಸ ಮೂಡಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಶಿಕ್ಷಣ, ಉದ್ಯೋಗ, ರಾಜಕೀಯ ಮೊದಲಾದ ಪ್ರಮುಖ ರಂಗಗಳಲ್ಲಿ ವಾಲ್ಮಿಕಿ ಸಮಾಜವು ತುಂಬಾ ಹಿಂದಿದೆ. ಅದನ್ನು ಮುಂಚೂಣಿಗೆ ತರುವ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದು ತಿಳಿಸಿದರು.
ತಾಲ್ಲೂಕು ವಾಲ್ಮಿಕಿ ಸಮಾಜದ ಅಧ್ಯಕ್ಷ ಮೈಲಾರೆಪ್ಪ ಕಲಕೇರಿ ಮಾತನಾಡಿ, ತಳವಾರ ಮತ್ತು ಪರಿವಾರ ಸಮಾಜಗಳನ್ನು ಎಸ್‌ಟಿ ವರ್ಗಕ್ಕೆ ಸೇರಿಸಲು ಸಂಸದ ಬಿ.ಶ್ರೀರಾಮುಲು, ಪ್ರಲ್ಹಾದ ಜೋಶಿ ಮೊದಲಾದ ನಾಯಕರು ಪಕ್ಷಾತೀತವಾಗಿ ಶ್ರಮಿಸಿದ್ದಾರೆ. ಅವರೆಲ್ಲರಿಗೂ ಸಮಾಜ ಸದಾ ಋಣಿಯಾಗಿರುತ್ತದೆ ಎಂದು ತಿಳಿಸಿದರು.
ಆರ್‌.ಬಿ.ತಿಮ್ಮಾಪೂರ ಮಾತನಾಡಿ, ಈಗಿರುವ ಹಳೆಯ ವಾಲ್ಮಿಕಿ ಸಮುದಾಯ ಭವನದಲ್ಲಿ ಎಲ್ಲ ಜಾತಿಯ ವಿದ್ಯಾರ್ಥಿಗಳಿಗೆ ಕೆಎಎಸ್‌, ಐಎಎಸ್‌ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನಡೆಸಲು ಚಿಂತನೆ ನಡೆಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ಅವರು ಅದಕ್ಕೆ ಸಮ್ಮತಿ ನೀಡಿದ್ದಾರೆ ಎಂದು ತಿಳಿಸಿದರು.ನಂತರ ಸಮಾಜದ ಮುಖಂಡರು ಸಿಹಿ ವಿತರಿಸಿ ಸಂಭ್ರಮಿಸಿದರು. ಮುಖಂಡರಾದ ವಿಜಯಕುಮಾರ ಬಣಕಾರ, ಬಾಬಣ್ಣ ಚನ್ನಳ್ಳಿ, ರಮೇಶ, ಪಕ್ಕಿರಪ್ಪ ರ್ಯಾವಣಕಿ, ಕನಕಪ್ಪ ಕಾತರಕಿ, ಭರಮಪ್ಪ ತಳವಾರ ಮೊದಲಾದವರು ಹಾಜರಿದ್ದರು.

loading...