ದಾಂಡೇಲಿಗೆ ಕಾರ್ಖಾನೆ ಭಾಗ್ಯ-ಸಚಿವ ದೇಶಪಾಂಡೆ

0
14
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಈಗ ತಾನೆ ಜನ್ಮ ತಾಳಿದ ದಾಂಡೇಲಿ ತಾಲೂಕನ್ನು ಮಾದರಿ ತಾಲೂಕನ್ನಾಗಿಸುವ ಮಹತ್ವದ ಗುರಿಯನ್ನಿಟ್ಟು ಅಭಿವೃದ್ಧಿ ಯೋಜನೆಗಳನ್ನು ಶರವೇಗದಲ್ಲಿ ತಂದಿರುವ ಹೆಮ್ಮೆ ರಾಜ್ಯ ಸರಕಾರಕ್ಕಿದೆ. ಎಲ್ಲ ಆಯಾಮಗಳಲ್ಲೂ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಸಧ್ಯದಲ್ಲೆ ದಾಂಡೇಲಿಯಲ್ಲಿ ರಾಷ್ಟ್ರ ಮಟ್ಟದ ಖ್ಯಾತ ಗಾಮೆರ್ಂಟ್ಸ್ ಕಾರ್ಖಾನೆಯಾದ ಶಾಹಿ ಎಕ್ಸಪೋಟ್ಸ್ ಕಂಪೆನಿಯವರ ಗಾರ್ಮೆಂಟ್ಸ್ ಕಾರ್ಖಾನೆ ಪ್ರಾರಂಭವಾಗಲಿದ್ದು, ಹತ್ತು ಎಕರೆ ಜಾಗದಲ್ಲಿ ಈ ಕಾರ್ಖಾನೆ ತಲೆಯೆತ್ತಲಿದ್ದು, ನಗರ ಹಾಗೂ ನಗರದ ಸುತ್ತಮುತ್ತಲ 5 ಸಾವಿರ ಯುವತಿಯರೊಗೆ, ಮಹಿಳೆಯರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಬಹುವರ್ಷಗಳ ಜನರ ಒತ್ತಾಸೆಯಂತೆ ದಾಂಡೇಲಿಗೆ ಕೈಗಾರಿಕೆ ಭಾಗ್ಯ ಬಂದಿದ್ದು, ಇದಕ್ಕೆ ಸರ್ವರು ಸಹಕರಿಸುವುದರ ಮೂಲಕ ಕೈಗಾರಿಕಾ ನಗರಿಯ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ದಾಂಡೇಲಿ ಇದರ ಅಧ್ಯಕ್ಷ ರಾಜೇಸಾಬ ಕೇಸನೂರು ಅವರು ಮಾತನಾಡಿ ಅಸಂಘಟಿತ ಕಾರ್ಮಿಕರ ಬೇಡಿಕೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಿದ ಸಚಿವ ದೇಶಪಾಂಡೆಯವರ ಕಾರ್ಯವನ್ನು ಅಭಿನಂದಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ನಗರ ಸಭಾ ಅಧ್ಯಕ್ಷ ಎನ್.ಜಿ.ಸಾಳುಂಕೆ ವಹಿಸಿದ್ದರು. ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ, ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಆರ್.ಪಿ.ನಾಯ್ಕ, ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪಾತಿಮಾ ಭೇಪಾರಿ, ನಗರ ಸಭಾ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರು, ಅಷ್ಪಾಕ ಶೇಖ, ರಾಮಲಿಂಗ ಜಾಧವ, ಎಂ.ಆರ್.ನಾಯ್ಕ, ಬಸೀರ್ ಗಿರಿಯಾಲ, ರೈಸಾ ಬಿಡಿಕರ, ಪೌರಾಯುಕ್ತ ಜತ್ತಣ್ಣ, ಯುವ ಕಾಂಗ್ರೆಸ್ ಕ್ಷೇತ್ರಾಧ್ಯಕ್ಷ ರಾಜೇಶ ರುದ್ರಪಟಿ ಮೊದಲಾದವರು ಉಪಸ್ಥಿತರಿದ್ದರು.

loading...