ದೌರ್ಜನ್ಯದ ಸಮಸ್ಯೆ ನಿವಾರಿಸಲು ಸಮಾಜವೂ ಕೈಜೋಡಿಸಬೇಕು: ನ್ಯಾ. ಸುನಿತಾ

0
24
loading...

ಕನ್ನಡಮ್ಮ ಸುದ್ದಿ-ಶಿರಸಿ: ದೌರ್ಜನ್ಯಕ್ಕೊಳಗಾದ ಮಹಿಳೆ ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ಹಲವು ಸೌಲಭ್ಯಗಳನ್ನು ಒಳಗೊಂಡ ‘ಗೆಳತಿ’ ವಿಶೇಷ ಚಿಕಿತ್ಸಾ ಘಟಕವನ್ನು ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಸಾಂತ್ವನ ಮಹಿಳಾ ವೇದಿಕೆ ಆಶ್ರಯದಲ್ಲಿ ಸೋಮವಾರ ವಿಶೇಷ ಚಿಕಿತ್ಸಾ ಘಟಕವನ್ನು ಉದ್ಘಾಟಿಸಲಾಯಿತು. ದೌರ್ಜನ್ಯಕ್ಕೊಳಗಾದ ಮಕ್ಕಳು ಹಾಗೂ ಮಹಿಳೆಯರಿಗೆ ಕಾನೂನು ನೆರವು, ವೈದ್ಯಕೀಯ ಚಿಕಿತ್ಸೆ, ತಾತ್ಕಾಲಿಕ ಆಶ್ರಯ, ಪೊಲೀಸ್‌ ನೆರವು, ಆಪ್ತ ಸಮಾಲೋನೆಯಂಥ ಸೌಲಭ್ಯಗಳು ತಾಲೂಕಾ ಸರ್ಕಾರಿ ಆಸ್ಪತ್ರೆಯ ಗೆಳತಿ ಘಟಕದಲ್ಲಿ ಲಭ್ಯವಿದೆ. ಜೊತೆಗೆ, ಮಹಿಳೆಯರು ಹಾಗೂ ಮಕ್ಕಳ ಮೇಲಾಗುವ ದೌರ್ಜನ್ಯದ ವಿರುದ್ಧ ಗೆಳತಿ ಘಟಕದಲ್ಲಿ ಪ್ರಕರಣ ದಾಖಲಿಸಲು ಕಲ್ಪಿಸಲಾಗಿದೆ. ಆಸ್ಪತ್ರೆ ಸಹಾಯವಾಣಿ ಪಕ್ಕದಲ್ಲಿಯೇ ಈ ಘಟಕ ಕಾರ್ಯನಿರ್ವಹಿಸಲಿದೆ. ಪ್ರತೀ ದಿನ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 6ರವರೆಗೆ ಘಟಕ ತೆರೆದಿರಲಿದೆ.
ತಾಲೂಕಾ ಆರೋಗ್ಯಾಧಿಕಾರಿ ವಿನಾಯಕ ಭಟ್ಟ ಮಾತನಾಡಿ, ಸಾಕಷ್ಟು ಸಂಖ್ಯೆಯ ದೌರ್ಜನ್ಯ ಪ್ರಕರಣ ನಡೆಯುತ್ತಿದ್ದರೂ ದಾಖಲಾಗುವ ಪ್ರಮಾಣ ತೀರಾ ಕಡಿಮೆ. ಹಾಗಾಗಿ ದೌರ್ಜನ್ಯಕ್ಕೊಳಗಾದವರು ಯಾವುದೇ ಹಿಂಜರಿಕೆ ಇಲ್ಲದೇ ಪ್ರಕರಣ ದಾಖಲಿಸಲಬೇಕು. ಹಾಗಾದರೆ ಮಾತ್ರ ನ್ಯಾಯ ನೀಡಲು ಸಾಧ್ಯ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಹೇಮಲತಾ ಮಾತನಾಡಿ, ಮಹಿಳೆಯರು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಒಂದೇ ಸೂರಿನಡಿ ಪರಿಹಾರ ಕಲ್ಪಿಸಲು ಗೆಳತಿ ಘಟಕ ಶ್ರಮಿಸಲಿದೆ ಎಂದರು.
ಸಾಂತ್ವನದ ಅಧ್ಯಕ್ಷೆ ಸಂಧ್ಯಾ ಕುರ್ಡೆಕರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಂಡಿತ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಪವಾಸ್ಕರ್‌ ಹಾಗೂ ಇತರರು ಇದ್ದರು. ವಿಜಯನಳಿನಿ ರಮೇಶ ಪ್ರಾಸ್ತಾವಿಕ ಮಾತನಾಡಿದರು. ಗೀತಾ ಸಂತೋಷ ಪ್ರಾರ್ಥಿಸಿದರು. ಜ್ಯೋತಿ ಭಟ್ಟ ನಿರೂಪಿಸಿದರು.

loading...