ನನ್ನ ಅಭಿವೃದ್ಧಿ ಕೆಲಸಗಳಿಗೆ ಬಹಿರಂಗ ಚರ್ಚೆಗೆ ಸಿದ್ಧ: ಅಶೋಕ ಪಟ್ಟಣ

0
37
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ಅಭಿವೃದ್ದಿ ಸಹಿಸದೆ ವಿರೋಧ ಪಕ್ಷದವರು ನನ್ನ ಬಗೆಗೆ ಇಲ್ಲ ಸಲ್ಲದ ಆರೋಪ ಮಾಡುವುದು ಸೂಕ್ತವಲ್ಲ. ಬಿಜೆಪಿ ಶಾಸಕರ ಅಧಿಕಾರದ ಅವಧಿಯಲ್ಲಿ ಆದ ಕೆಲಸಗಳ ಕುರಿತು ಮಾಹಿತಿ ನೀಡಲಿ. ನಾನು ಸಹ ನನ್ನ ಅಧಿಕಾರಾವಧಿಯಲ್ಲಿ ನಡೆದ ಕೆಲಸಗಳ ಕುರಿತು ಬಹಿರಂಗ ಚರ್ಚೆಗೆ ಸಿದ್ಧ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ತಾಲೂಕಿನ ಕೆ.ಚಂದರಗಿಯಲ್ಲಿ ಬುಧವಾರ ಸುಮಾರು 67 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಬಸ್‌ ನಿಲ್ದಾಣ ಉದ್ಘಾಟನೆ ಹಾಗೂ ಚಂದರಗಿಯಿಂದ ಹುಲಕುಂದ ವರೆಗೆ ಸುಮಾರು 3.5 ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವೀರಭದ್ರೇಶ್ವರ ಏತ ನೀರಾವರಿಗೆ ಸುಮಾರು 700 ಕೋಟಿ, ಸಾಲಾಪೂರ ಬಸವೇಶ್ವರ ಏತ ನೀರಾವರಿ ಕಾಮಗಾರಿಗೆ 540 ಕೋಟಿ ಹಣವನ್ನು ಸರಕಾರದಿಂದ ಬಿಡುಗಡೆಗೊಳಿಸಿದ್ದೇನೆ. ಸಾಕಷ್ಟು ಅಭಿವೃದ್ಧಿ ಮಾಡಿದರೂ ಅದನ್ನು ಸಹಿಸದ ಕೆಲ ವಿರೋಧಿಗಳು ಮಾಡುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.
ಸಾರಿಗೆ ಸಂಸ್ಥೆಯ ನಿರ್ದೇಶಕ ಅಕ್ಬರ ಮುಲ್ತಾನಿ, ಗ್ರಾಮ ಪಂಚಾಯತ ಅಧ್ಯಕ್ಷ ಹಣಮಂತ ಕೌಜಲಗಿ, ಉಪಾಧ್ಯಕ್ಷೆ ಭೀಮವ್ವ ವಾಲಿಕಾರ, ಎಪಿಎಂಸಿ ಅಧ್ಯಕ್ಷ ಬಿ.ಎಂ. ಪಾಟೀಲ, ಹೆಸ್ಕಾಂ ನಿರ್ದೇಶಕ ಮಹಾಂತೇಶ ಉಮತಾರ, ಗ್ರಾ.ಪಂ ಸದಸ್ಯೆ ವಿದ್ಯಾ ಬಂಡಿ, ಜಯಪ್ರಕಾಶ ಶಿಂಧೆ, ಉದಯಕುಮಾರ ಸೋಮನಟ್ಟಿ, ಶಿವಲಿಂಗಯ್ಯ ಹಿರೇಮಠ, ನಿಗಮದ ಎಇಇ ಯಶವಂತ ನಾಯಕ, ಎಇ ಮಾಲತಿ, ಗುತ್ತಿಗೆದಾರ ಗೋಪಾಲ ಸಂಶಿ ಸೇರಿದಂತೆ ಮುಂತಾದವರು ಇದ್ದರು.
ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ ರಾಠೋಡ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಆನಂದ ಪಾಟೀಲ, ಭೀಮಶಿ ಮಾಯನ್ನವರ ನಿರೂಪಿಸಿದರು. ರಾಮದುರ್ಗ ಸಾರಿಗೆ ಘಟಕದ ವ್ಯವಸ್ಥಾಪಕ ಎಚ್‌. ಆರ್‌. ಪಾಟೀಲ ವಂದಿಸಿದರು.

loading...