ನಿಯಮ ಉಲ್ಲಂಘಿಸಿ ವಿದ್ಯುತ್‌ ಪೂರೈಕೆ

0
26
loading...

ಕನ್ನಡಮ್ಮ ಸುದ್ದಿ ಖಾನಾಪುರ: ತಾಲೂಕಿನ ನಾಗುರ್ಡಾ ಗ್ರಾಮದ ಕೃಷಿ ಜಮೀನಿನಲ್ಲಿ ಜಿಲ್ಲೆಯ ಪ್ರಭಾವೀ ಕಾಂಗ್ರೆಸ್‌ ಮುಖಂಡರೊಬ್ಬರ ಸೂಚನೆಯ ಮೇರೆಗೆ ನಿಯಮಬಾಹಿರ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ಇದರಿಂದ ಗ್ರಾಮದ ಪೂರ್ವ ಭಾಗದಲ್ಲಿರುವ ನೂರಾರು ರೈತರ ಕೃಷಿ ಜಮೀನುಗಳಲ್ಲಿರುವ ಪಂಪ್‌ ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್‌ ಸಿಗದೇ ತೊಂದರೆಯಾಗುತ್ತಿದ್ದು, ಕೂಡಲೇ ಈ ಅಚಾತುರ್ಯವನ್ನು ಸರಿಪಡಿಸಿ ಗ್ರಾಮದ ರೈತರ ಸಮಸ್ಯೆ ಇತ್ಯರ್ಥಕ್ಕೆ ಹೆಸ್ಕಾಂ ಮುಂದಾಗಬೇಕು ಎಂದು ಆಗ್ರಹಿಸಿದ ನಾಗುರ್ಡಾ ಗ್ರಾಮಸ್ಥರು ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಶಾಸಕ ಅರವಿಂದ ಪಾಟೀಲ ಮತ್ತು ಹೆಸ್ಕಾಂ ಹೆಸ್ಕಾಂ ಎಇಇ ಎಸ್‌.ಪಿ ಅಲಕುಂಟೆ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅರವಿಂದ ಪಾಟೀಲ, ರಾಜಕೀಯ ಒತ್ತಡಕ್ಕೆ ಮಣಿದು ಹೆಸ್ಕಾಂ ಶಾಖಾಧಿಕಾರಿ ನಿಯಮ ಬಾಹಿರವಾಗಿ ನಾಗುರ್ಡಾ ಗ್ರಾಮದ ರೈತರಿಗೆ ಥ್ರೀ ಫೇಸ್‌ ವಿದ್ಯುತ್‌ ಸರಬರಾಜು ಮಾಡಿದ್ದಾರೆ. ಆದರೆ ತಮಗೆ ವಿದ್ಯುತ್‌ ಸಂಪರ್ಕ ಒದಗಿಸುವಂತೆ ಕಳೆದ ಹಲವು ವರ್ಷಗಳಿಂದ ಆಗ್ರಹಿಸುತ್ತಿರುವ ಗ್ರಾಮದ ಕೆಲ ರೈತರ ಸಮಸ್ಯೆ ಇತ್ಯರ್ಥದತ್ತ ಗಮನಹರಿಸದೇ ತಾರತಮ್ಯ ನೀತಿ ಅನುಸರಿಸಿದ್ದಾರೆ. ಇನ್ನೂ ಎಸ್ಟಿಮೇಟ್‌, ಪ್ರೊಜೆಕ್ಟ್‌ ರಿಪೋರ್ಟ್‌, ಸ್ಯಾಂಕ್ಷನ್‌ ಯಾವುದೂ ಇಲ್ಲದ ಪಂಪ್‌ ಸೆಟ್‌ಗೆ ಕೇವಲ ಕಾಂಗ್ರೆಸ್‌ ಮುಖಂಡರ ಮೌಖಿಕ ಸೂಚನೆಯಂತೆ ವಿದ್ಯುತ್‌ ಸರಬರಾಜು ಮಾಡುವ ಮೂಲಕ ಕರ್ತವ್ಯಲೋಪ ಎಸಗಿದ್ದಾರೆ. ಇವರ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳಬೇಕು ಮತ್ತು ಗ್ರಾಮದ ರೈತರ ಬೇಡಿಕೆಗಳನ್ನು ಒಂದು ವಾರದ ಒಳಗೆ ಈಡೇರಿಸಬೇಕು ಎಂದು ಹೆಸ್ಕಾಂ ಎಇಇಗೆ ಸೂಚಿಸಿದರು.
ಗ್ರಾಮಸ್ಥರ ಮನವಿ ಸ್ವೀಕರಿಸಿದ ಹೆಸ್ಕಾಂ ಎಇಇ ಅಲಕುಂಟೆ, ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿದ್ದು, ಗ್ರಾಮಸ್ಥರ ವಿರೋಧದ ಕಾರಣ ಈಗಾಗಲೇ ನಾಗುರ್ಡಾ ಗ್ರಾಮದ ರೈತನಿಗೆ ನೀಡಿದ್ದ ವಿದ್ಯುತ್‌ ಸರಬರಾಜನ್ನು ನಿಲ್ಲಿಸಲಾಗಿದೆ. ಈ ಪ್ರಸಂಗದಲ್ಲಿ ಮೇಲ್ನೋಟಕ್ಕೆ ಹೆಸ್ಕಾಂ ಸಿಬ್ಬಂದಿ ರಾಜಕೀಯ ಒತ್ತಡಕ್ಕೆ ಮಣಿದು ನಿಯಮ ಉಲ್ಲಂಘಿಸಿ ವಿದ್ಯುತ್‌ ನೀಡಿರುವುದಾಗಿ ಕಂಡು ಬಂದಿದೆ. ಹೀಗಾಗಿ ನಿಯಮ ಪಾಲಿಸದೇ ಕರ್ತವ್ಯಲೋಪ ಎಸಗಿದ ಶಾಖಾಧಿಕಾರಿ ಜೆ.ಎ ಬಂಗೇರಾ ಮತ್ತು ಇಬ್ಬರು ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದ್ದು, ಗ್ರಾಮದ ಉಳಿದ ರೈತರಿಗೆ ನಿಯಮಿತವಾಗಿ ವಿದ್ಯುತ್‌ ಸರಬರಾಜಿಗೆ ಸಂಬಂಧಿಸಿದಂತೆ ಕೂಡಲೇ ಮೇಲಾಕಾರಿಗಳ ಜೊತೆ ಚರ್ಚಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ನಾಗುರ್ಡಾ ಗ್ರಾಮಸ್ಥರು, ಹೆಸ್ಕಾಂ ಗ್ರಾಹಕರು ಮತ್ತು ಅಧಿಕಾರಿಗಳು ಇದ್ದರು.

loading...