ನೀರಾವರಿ ಯೋಜನೆಗಳಿಗೆ ಆದ್ಯತೆ : ಶಾಸಕ ತಹಸೀಲ್ದಾರ್

0
10
loading...

ಹಾನಗಲ್ಲ: ಇತ್ತೀಚಿನ ವರ್ಷಗಳಲ್ಲಿ ಮಳೆಯ ಅಭಾವ ಕೃಷಿ ವ್ಯವಸ್ಥೆಯನ್ನು ತಲ್ಲಣಗೊಳಿಸಿದೆ, ಹೀಗಾಗಿ ರೈತರಿಗೆ ಅಗತ್ಯದ ನೀರಾವರಿ ಯೋಜನೆಗಳನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಧರ್ಮಾ, ವರದಾ ನದಿ ನೀರು ಜೊತೆಯಲ್ಲಿ ಅಲ್ಲಲ್ಲಿ ಹರಿದು ನೀರು ಪೋಲಾಗುತ್ತಿದ್ದ ಹಳ್ಳಗಳ ನೀರನ್ನು ಬಳಕೆ ಮಾಡಿಕೊಳ್ಳುವ ಅಂಗವಾಗಿ ಏತ ನೀರಾವರಿ ಯೋಜನೆ, ಬ್ಯಾರೇಜ್ ಮತ್ತು ಚೆಕ್ ಡ್ಯಾಮ್‍ಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಮನೋಹರ ತಹಸೀಲ್ದಾರ್ ಹೇಳಿದರು.

ಸೋಮವಾರ ತಾಲೂಕಿನ ಚಿಕ್ಕಹುಲ್ಲಾಳ ಗ್ರಾಮ ಸಮೀಪದಲ್ಲಿನ ವರದಾ ನದಿಗೆ 2.80 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನಲ್ಲಿ ಕಡಿಮೆ ಮಳೆ ಬೀಳುವ ಪ್ರದೇಶದ ಕೃಷಿ ಜಮೀನುಗಳಿಗೆ ಶಾಶ್ವತ ನೀರಾವರಿಯ ಯೋಜನೆ ನಿರ್ಮಿಸುವ ಉದ್ದೇಶದಿಂದ ಚಿಕ್ಕ ನೀರಾವರಿ ಇಲಾಖೆಯಿಂದ 13.60 ಕೋಟಿ ವೆಚ್ಚದಲ್ಲಿ ಒಟ್ಟು 4 ಏತ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ, ಇಷ್ಟಲ್ಲದೆ, ಧರ್ಮಾ, ವರದಾ ನದಿಗೆ ಅಲ್ಲಲ್ಲಿ ಬ್ಯಾರೇಜ್ ಮತ್ತು ಹಳ್ಳಗಳಿಗೆ ಚೆಕ್‍ಡ್ಯಾಂ ನಿರ್ಮಿಸುವ ಮೂಲಕ ಮಳೆಗಾಲದಲ್ಲಿನ ನೀರು ಸಂಗ್ರಹಣೆಗೆ ಒತ್ತು ನೀಡಲಾಗುತ್ತಿದೆ, ಈ ಕಾರ್ಯದಿಂದ ಅಂತರ್‍ಜಲಮಟ್ಟ ಹೆಚ್ಚಳ ಸಾಧ್ಯವಾಗಲಿದೆ ಎಂದರು.

ಮುಖಂಡರಾದ ಬಿ.ಶಿವಪ್ಪ, ಭರಮಗೌಡ್ರ ಪಾಟೀಲ, ಚಿಕ್ಕನೀರಾವರಿ ಇಲಾಖೆ ಅಭಿಯಂತರ ವಿ.ಆರ್.ಹಿರೇಗೌಡ್ರ, ರಾಘವೇಂದ್ರ ಇದ್ದರು.
ನಂತರ ತಾಲೂಕಿನ ಬ್ಯಾತನಾಳ ಗ್ರಾಮ ಸಮೀಪ ವರದಾ ನದಿಗೆ 4.80 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಏತ ನೀರಾವರಿ ಯೋಜನೆಗೆ ಶಾಸಕ ಮನೋಹರ ತಹಸೀಲ್ದಾರ್ ಚಾಲನೆ ನೀಡಿದರು. ಸುರೇಶ ದೊಡ್ಡಕುರುಬರ, ಭೀಮಪ್ಪ ಲಮಾಣಿ, ಯಲ್ಲಪ್ಪ ಕಲ್ಲೇರ, ಲೋಕೇಶ ಅಗಸಿಬಾಗಿಲ, ಹನುಮಂತಪ್ಪ ಕಾನಮನಿ, ಕರಿಯಪ್ಪ ದಿಬ್ಬಣ್ಣನವರ, ನಾಗರಾಜ ಈಳಿಗೇರ ಇದ್ದರು.

ತಾಲೂಕಿನ ಮಕರವಳ್ಳಿ ಗ್ರಾಮ ಸಮೀಪ ವರದಾ ನದಿಗೆ 4 ಕೋಟಿಯಲ್ಲಿ ನಿರ್ಮಾಣಗೊಳ್ಳುವ ಏತ ನೀರಾವರಿ ಯೋಜನೆ ಕಾಮಗಾರಿಗೆ ಶಾಸಕ ತಹಸೀಲ್ದಾರ್ ಚಾಲನೆ ನೀಡಿದರು. ಮುಖಂಡರಾದ ಜಗದೀಶ ಗಂಟನವರ, ವೀರಪ್ಪ ದಾಳೇರ, ಮಂಜು ಮಲಗುಂದ, ಸಿದ್ಧಪ್ಪ ಹಾವೇರಿ, ಉಮೇಶ ಕಬ್ಬೂರ, ಲಕ್ಷ್ಮಣ ಸೊಟ್ಟನವರ ಇದ್ದರು.
ಕಾಮಗಾರಿಗಳ ವಿವರಣೆ:

ಮಕರವಳ್ಳಿ ಏತ ನೀರಾವರಿ: ತಾಲ್ಲೂಕಿನ ಮಕರವಳ್ಳಿ ಗ್ರಾಮ ಸಮೀಪ 4 ಕೋಟಿ ಮೊತ್ತದಲ್ಲಿ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ವರದಾ ನದಿ ತಟದಲ್ಲಿ ಜಾಕ್ವೆಲ್ ನಿರ್ಮಾಣ ಮಾಡುವ ಮೂಲಕ 300 ಅಶ್ವಶಕ್ತಿಯ (ಎಚ್.ಪಿ) 2 ವರ್ಟಿಕಲ್ ಟರ್ಬೈನ್ ಪಂಪ್‍ಗಳಿಂದ ನೀರೆತ್ತಿ 3180 ಮೀ ಉದ್ದದ ಪೈಪ್‍ಲೈನ್ ಮುಖಾಂತರ ಈ ಭಾಗದ ಸುಮಾರು 284 ಎಕರೆ ಕೃಷಿಭೂಮಿಗೆ ನೀರುಣಿಸುವ ಯೋಜನೆ ಚಾಲನೆ ಪಡೆಯಲಿದೆ, ಅಲ್ಲದೆ, ಮಕರವಳ್ಳಿ ಮತ್ತು ಮೂಡೂರ ಗ್ರಾಮದ ಕೆರೆಗಳನ್ನು ತುಂಬಿಸುವ ವ್ಯವಸ್ಥೆ ಈ ಯೋಜನೆಯಲ್ಲಿದೆ, ಈ ಕಾರ್ಯದಿಂದ ಅಂತರ್‍ಜಲಮಟ್ಟ ಹೆಚ್ಚಳ, ಕೊಳವೆಬಾವಿಗಳ ಪುನಶ್ಚೇತನ ಸಾಧ್ಯವಾಗಲಿದೆ ಎಂದು ಚಿಕ್ಕ ನೀರಾವರಿ ಎಂಜನಿಯರ್ ವಿ.ಆರ್.ಹಿರೇಗೌಡ್ರ ಹೇಳುತ್ತಾರೆ.
ಬ್ಯಾತನಾಳ ಏತ ನೀರಾವರಿ ಯೋಜನೆ: 4.80 ಕೋಟಿ ಮೊತ್ತದಲ್ಲಿ ಅನುಷ್ಠಾನಕ್ಕೆ ಬರಲಿರುವ ಬ್ಯಾತನಾಳ ಏತ ನೀರಾವರಿ ಯೋಜನೆಯಿಂದ ಈ ಭಾಗದ ಹಲವಾರು ಕೆರೆಗಳಿಗೆ ನೀರು ತುಂಬಿಸುವುದು ಮತ್ತು ಸುಮಾರು 150 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ವ್ಯವಸ್ಥೆ ಇದೆ, ಬ್ಯಾತನಾಳ ಗ್ರಾಮ ಹತ್ತಿರ ವರದಾ ನದಿಗೆ ಜಾಕ್ವೆಲ್ ನಿರ್ಮಾಣ ಮಾಡಿ 120 ಅಶ್ವಶಕ್ತಿ 2 ವರ್ಟಿಕಲ್ ಟರ್ಬೈನ್ ಪಂಪ್‍ಗಳಿಂದ ನೀರೆತ್ತಿ 3000ಮೀ ಉದ್ದದ ಪೈಪ್‍ಲೈನ್ ಮುಖಾಂತರ ಕಷಿ ಭೂಮಿಗೆ ನೀರು ಹರಿಸುವ ಯೋಜನೆ ಇಟ್ಟುಕೊಳ್ಳಲಾಗಿದೆ.

ಚಿಕ್ಕಹುಲ್ಲಾಳ ಏತ ನೀರಾವರಿ: ಚಿಕ್ಕಹುಲ್ಲಾಳ ಗ್ರಾಮದ 2 ಕೆರೆಗಳನ್ನು ತುಂಬಿಸುವುದು ಮತ್ತು ಸುಮಾರು 300 ಎಕರೆ ಅಚ್ಚುಕಟ್ಟು ಕೃಷಿಭೂಮಿಯನ್ನು ನೀರಾವರಿಗೆ ಒಳಪಡಿಸುವ ಚಿಕ್ಕಹುಲ್ಲಾಳ ಏತ ನೀರಾವರಿ ಯೋಜನೆಯು 2.80 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿದೆ, ಚಿಕ್ಕಹುಲ್ಲಾಳ ಗ್ರಾಮ ಸಮೀಪ ವರದಾ ನದಿಯಲ್ಲಿ ಜಾಕ್ವೆಲ್ ನಿರ್ಮಿಸಿ 130 ಅಶ್ವಶಕ್ತಿ 2 ವರ್ಟಿಕಲ್ ಟರ್ಬೈನ್ ಪಂಪ್‍ಗಳಿಂದ ನೀರೆತ್ತಿ 2500 ಮೀ ಉದ್ದದ ಪೈಪ್‍ಲೈನ್ ಮೂಲಕ ಕೃಷಿ ಭೂಮಿಯನ್ನು ನೀರಾವರಿ ಕ್ಷೇತ್ರವಾಗಿಸುವ ಯೋಜನೆ ಇದಾಗಿದೆ.
ಕನ್ನೇಶ್ವರ ಏತ ನೀರಾವರಿ: ಕನ್ನೇಶ್ವರ ಗ್ರಾಮ ಸಮೀಪ ವರದಾ ನದಿಗೆ ಜಾಕ್ವೆಲ್ ನಿರ್ಮಿಸಿ 65 ಅಶ್ವಶಕ್ತಿಯ 2 ವರ್ಟಿಕಲ್ ಟರ್ಬೈನ್ ಪಂಪ್‍ಗಳಿಂದ ನೀರೆತ್ತಿ 1250 ಮೀ ಉದ್ದದ ಪೈಪ್‍ಲೈನ್ ಮುಖಾಂತರ ಕನ್ನೇಶ್ವರ ಭಾಗದ ಕೆರೆಗಳನ್ನು ತುಂಬಿಸಲು ಮತ್ತು ಸುಮಾರು 150 ಎಕರೆ ಕೃಷಿಭೂಮಿಗೆ ನೀರುಣಿಸಲು ಸಾಧ್ಯವಾಗಲಿದೆ.

ಈ 4 ಯೋಜನೆಗಳ ಪೈಕಿ ಕನ್ನೇಶ್ವರ ಏತ ನೀರಾವರಿ ಯೋಜನೆಗೆ ಒಂದು ವಾರದ ಹಿಂದೆ ಶಾಸಕ ಮನೋಹರ ತಹಸೀಲ್ದಾರ್ ಚಾಲನೆ ನೀಡಿದ್ದಾರೆ, ಈ ಎಲ್ಲ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಕಾಮಗಾರಿ ಶೀಘ್ರವಾಗಿ ಆರಂಭ ಪಡೆಯಲಿವೆ. ನಮ್ಮ ಇಲಾಖೆಯಿಂದ ಧರ್ಮಾ ನದಿ ನೀರಿನ ಬಳಕೆಗೂ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದು, ಬ್ಯಾರೇಜ್, ಚೆಕ್‍ಡ್ಯಾಮ್ ನಿರ್ಮಾಣ ನಡೆಯಲಿದೆ ಎಂದು ಚಿಕ್ಕ ನೀರಾವರಿ ಅಭಿಯಂತರ ವಿ.ಆರ್.ಹಿರೇಗೌಡ್ರ ಹೇಳಿದರು.

loading...