ನೀರಾವರಿ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಮನವಿ

0
16
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ಸಿಂಗಟಾಲೂರ ಏತ ನೀರಾವರಿ ಯೋಜನೆಯ ಮೂಲಕ ತಾಲೂಕಿನ ಬೀಡನಾಳತಾಂಡಾ, ವಿರುಪಾಪುರತಾಂಡಾ, ವಿರುಪಾಪುರ ಹಾಗೂ ಮುಷ್ಠಿಕೊಪ್ಪ ಗ್ರಾಮದ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ರೈತರು ಸೋಮವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಾಮಾಜಿಕ ಹೋರಾಟಗಾರ ವೈ.ಎನ್‌.ಗೌಡರ ಮಾತನಾಡಿ, ಸಿಂಗಟಾಲೂರ ಏತ ನೀರಾವರಿ ಯೋಜನೆಗಾಗಿ ಹಮ್ಮಿಗಿ ಬಳಿ ಬ್ಯಾರೇಜ್‌ ನಿರ್ಮಿಸಿದ್ದು ಇದುವರೆಗೂ ಈ ಭಾಗದ ಜನರಿಗೆ ಮತ್ತು ರೈತರಿಗೆ ಯಾವುದೆ ರೀತಿಯ ಪ್ರಯೋಜನವಾಗಿಲ್ಲ. ಈ ಯೋಜನೆಯನ್ನು ಸೂಕ್ತ ರೀತಿಯಲ್ಲಿ ನಿರ್ವಾಹಣೆ ಮಾಡುವಲ್ಲಿ ಸರ್ಕಾರ ಮತ್ತು ನೀರಾವರಿ ಇಲಾಖೆಯು ಸಂಪೂರ್ಣವಾಗಿ ವಿಫಲವಾಗಿದೆ ಎಂದು ತಿಳಿಸಿದರು.
ರೈತ ಮುಖಂಡ ಸುಭಾಷ ಗುಡಿಮನಿ ಮಾತನಾಡಿ, ಬೀಡನಾಳತಾಂಡಾ, ವಿರುಪಾಪುರತಾಂಡಾ, ವಿರುಪಾಪುರ ಹಾಗೂ ಮುಷ್ಠಿಕೊಪ್ಪ ಗ್ರಾಮದ ಜಮೀನುಗಳಲ್ಲಿ ಸಿಂಗಟಾಲೂರ ಏತ ನೀರಾವರಿಯ ಮುಖ್ಯ ಕಾಲುವೆಗಳು ಹಾದು ಹೋಗಿವೆ. ಆದರೆ, ಆ ಎಲ್ಲಾ ಗ್ರಾಮದ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿಲ್ಲ. ಸೂಕ್ಷ್ಮ ಹನಿ ನೀರಾವರಿ ಯೋಜನೆಯಲ್ಲೂ ಈ ಗ್ರಾಮಗಳನ್ನು ಸೇರ್ಪಡಿಸದಿರುವುದು ಬೇಸರದ ಸಂಗತಿ ಎಂದು ಹೇಳಿದರು.
ತಹಸೀಲ್ದಾರ್‌ ಭ್ರಮರಾಂಬ ಗುಬ್ಬಿಶೆಟ್ಟಿ ಹಾಗೂ ನೀರಾವರಿ ಇಲಾಖೆಯ ಕೆಎಂಕೆ ಶರ್ಮಾ ಅವರು ಮನವಿ ಸ್ವೀಕರಿಸಿ, ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ಷ್ಮ ಹನಿ ನೀರಾವರಿ ಟೆಂಡರ್‌ ಪ್ರಕ್ರಿಯಿಯಲ್ಲಿ ಬೀಡನಾಳತಾಂಡಾ, ವಿರುಪಾಪುರತಾಂಡಾ, ವಿರುಪಾಪುರ ಹಾಗೂ ಮುಷ್ಠಿಕೊಪ್ಪ ಗ್ರಾಮಗಳನ್ನು ಸೇರಿಸಲಾಗುವುದು ಎಂದು ತಿಳಿಸಿದರು.
ರೈತ ಮುಖಂಡರಾದ ಕೊಟ್ರಗೌಡ ಪಾಟೀಲ, ಸೋಮಣ್ಣ ದೇಸಾಯಿ, ವೀರನಗೌಡ ಪಾಟೀಲ, ಈಶಪ್ಪ ದೊಡ್ಡಮನಿ, ಕನಕಪ್ಪ ಮರಿಗೌಡ್ರ, ಮುತ್ತಯ್ಯ ಅಯ್ಯನಗೌಡ್ರ, ಮೃತ್ಯುಂಜಯ ಹಿರೇಮಠ, ಲಕ್ಷ್ಮೀ ಲಮಾಣಿ, ಬೆನಕರಾಜ ಪೂಜಾರ, ಕುಬೇರ ದೊಡ್ಡಮನಿ, ಚಿದಾನಂದ ರಾಠೋಡ್‌, ಮಂಜಯ್ಯ ಲಕ್ಷ್ಮೇಶ್ವರ, ಮಾನಪ್ಪ ಕಂಬಳಿ, ಬೂದಯ್ಯ ಹಿರೇಮಠ, ಇದ್ದರು.

loading...