ನೂತನ ಬಸ್‌ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ

0
30
loading...

ಕನ್ನಡಮ್ಮ ಸುದ್ದಿ- ಧಾರವಾಡ: ಗರಗ ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಾದ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಗುಣಮಟ್ಟದ ಸುಸಜ್ಜಿತ ನೂತನ ಬಸ್‌ ನಿಲ್ದಾಣದ ನಿರ್ಮಾಣಕ್ಕಾಗಿ ರೂ.50 ಲಕ್ಷ ವೇಚ್ಚದಲ್ಲಿ ಮೊದಲ ಹಂತದ ಕಾಮಗಾರಿ ಆರಂಭಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. ಗರಗ ಗ್ರಾಮದಲ್ಲಿ ಸುಸಜ್ಜಿತ ನೂತನ ಬಸ್‌ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದರು. ಗರಗ ಬಸ್‌ ನಿಲ್ದಾಣವು ಧಾರವಾಡ ಘಟಕದ ವ್ಯಾಪ್ತಿಯಲ್ಲಿದ್ದು, ಈ ಬಸ್‌ ನಿಲ್ದಾಣದಿಂದ ಗರಗ ಉಪನಗರದ 20 ಸರತಿಗಳು ಹಾಗೂ ಗರಗ ಮಾರ್ಗವಾಗಿ ಕಾರ್ಯಾಚರಣೆಯಾಗುವ ಬೈಲಹೊಂಗಲ, ಹಂಗರಕಿ, ಮಾದನಭಾವಿ, ಕೊಟಬಾಗಿ, ಮತ್ತು ತಡಕೋಡ ಮಾರ್ಗಗಳ ಸೇರಿದಂತೆ 70 ಸರತಿಗಳು ಪ್ರತಿ ದಿನ ಕಾರ್ಯಾಚರಣೆಯಾಗುತ್ತಿವೆ ಎಂದರು.
ಇಲ್ಲಿನ ಪ್ರಯಾಣಿಕರಿಗೆ ಸರಿಯಾದ ಮತ್ತು ಸುವ್ಯವಸ್ಥಿತ ಬಸ್‌ ನಿಲ್ದಾಣದ ಸೌಲಭ್ಯವಿರದೇ ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ ತುಂಬಾ ತೊಂದರೆಯಾಗುತಿತ್ತು. ಈ ಸಮಸ್ಯೆಯನ್ನು ಅರಿತು ಗರಗ ಗ್ರಾಮದಲ್ಲಿ ನೂತನ ಬಸ್‌ ನಿಲ್ದಾಣವನ್ನು ನಿರ್ಮಿಸಲು ಯೋಜಸಿ ಗರಗ ಗ್ರಾಮ ಪಂಚಾಯಿತಿಯ ಸಹಾಯ ಮತ್ತು ಸಹಕಾರದೊಂದಿಗೆ ಅಂದಾಜು 7 ಗುಂಟಾಕ್ಕಿಂತ ಹೆಚ್ಚು ನಿವೇಶನವನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಖರೀದಿಸಲಾಗಿದೆ. ಈ ನಿವೇಶನದಲ್ಲಿ ಅಂದಾಜು 50 ಲಕ್ಷ ಮೊತ್ತದಲ್ಲಿ ಸಂಪೂರ್ಣವಾಗಿ ರಾಜ್ಯ ಸರ್ಕಾರದ ಅನುದಾನದಡಿಯಲ್ಲಿ ಬಸ್‌ ನಿಲ್ದಾಣವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗನವರ ಪ್ರಾಸ್ತಾವಿಕ ಮಾತನಾಡಿ, ಹುಬ್ಬಳ್ಳಿ ವಿಭಾಗದಿಂದ ಧಾರವಾಡ ಘಟಕವನ್ನು ಬೇರ್ಪಡಿಸಿ ಆರು ವರ್ಷಗಳು ಕಳೆದವು.
ಈ ಅವಧಿಯಲ್ಲಿ ಗ್ರಾಮೀಣ ಜನರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿ ನೂತನ ಬಸ್‌ ನಿಲ್ದಾಣಗಳ ನಿರ್ಮಾಣ, ನೂತನ ಬಸ್‌ ಖರೀದಿ, ಹೊಸ ಮಾರ್ಗಗಳ ಸೇರ್ಪಡೆ ಮತ್ತು ಹೆಚ್ಚುವರಿ ಬಸ್‌ಗಳನ್ನು ಸಾರ್ವಜನಿಕರ ಅನೂಕುಲತೆಗಾಗಿ ನಿತ್ಯ ಓಡಿಸಲಾಗುತ್ತಿದೆ ಎಂದು ಹೇಳಿದರು. ಧಾರವಾಡ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್‌ ಬಾಗವಾನ್‌ ಸ್ವಾಗತಿಸಿದರು. ವಿಭಾಗದ ಸಹಾಯಕ ಆಡಳಿತಾಧಿಕಾರಿ ಶಿವಪ್ರಸಾದ ಕೆ.ಎಮ್‌. ನಿರೂಪಿಸಿದರು. ವಿಭಾಗೀಯ ಸಂಚಾರ ಅಧಿಕಾರಿ ಶಶಿಧರ ಚನ್ನಪ್ಪಗೌಡರ ವಂದಿಸಿದರು. ತಾಲೂಕು ಪಂಚಾಯತ ಸದಸ್ಯರಾದ ಸರಸ್ವತಿ ಮಗೇಣ್ಣವರ್‌ ಪಾಲ್ಗೊಂಡಿದ್ದರು.

loading...