ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಪಾಟೀಲ

0
19
loading...

ಕನ್ನಡಮ್ಮ ಸುದ್ದಿ-ನರೇಗಲ್ಲ: ರೋಣ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೊಂದಿಗೆ ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಅವರು ಸ್ಥಳೀಯ ಪಟ್ಟಣ ಪಂಚಾಯಿತಿಯಲ್ಲಿ ನವೀಕೃತ ಸಭಾ ಭವನವನ್ನು ಉದ್ಘಾಟಿಸಿ ಮಾತನಾಡಿದರು.

ಪಟ್ಟಣದ ಬಸ್ ನಿಲ್ದಾಣದಿಂದ ಶ್ರೀ ಅನ್ನದಾನೇಶ್ವರಮಠದ ವರೆಗೆ ದ್ವಿಪಥ ರಸ್ತೆ ನಿರ್ಮಾಣಕ್ಕೆ 2 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ಆದರೆ ಕಾಮಗಾರಿಗೆ ಮರಗಳನ್ನು ಕಡಿಯದಂತೆ ಪರಿಸರವಾದಿಗಳು ತಕರಾರು ಸಲ್ಲಿಸಿದ್ದು, ಕಾಮಗಾರಿ ನೆನೆಗುದಿಗೆ ಬಿದ್ದಿದೆ. ನಗರದ ಸೌಂದರಿಕರಣ ಹಾಗೂ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಸ್ತೆ ದ್ವಿಪಥವಾಗುವುದು ಅವಶ್ಯಕವಾಗಿದೆ. ನಮಗೂ ಪರಿಸರದ ರಕ್ಷಣೆಯ ಬಗ್ಗೆ ಜವಾಬ್ದಾರಿ ಇದೆ. ಅವಶ್ಯಕತೆ ಇದ್ದಲ್ಲಿ ಮಾತ್ರ ಮರಗಳನ್ನು ಕಡಿಯುವುದು ಅನಿವಾರ್ಯ. ಆದಷ್ಟು ಮರಗಳನ್ನು ಉಳಿಸಿ ರಸ್ತೆ ನಿರ್ಮಾಣ ಮಾಡುವಂತೆ ತಿಳಿಸಲಾಗಿದೆ.

ಒಂದು ಮರವನ್ನು ಕಡಿಯುವ ಪ್ರಸಂಗ ಬಂದರೆ ನೂರು ಮರಗಳನ್ನು ನೆಡಲಾಗುವುದು. ಆದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ಕತರಾರು ಮಾಡಬೇಡಿ ಎಂದರು. ಪ್ರಾಮಾಣಿಕ ಅಧಿಕಾರಿಗಳು ಪರಿಶ್ರಮದಿಂದ ಉತ್ತಮ ಕಾರ್ಯಗಳಾಗುತ್ತವೆ. ಅದಕ್ಕೆ ಉದಾಹರಣೆಯಂತೆ ನರೇಗಲ್ಲ ಪ.ಪಂ ಮುಖ್ಯಾಧಿಕಾರಿಗಳ ಪರಿಶ್ರಮದಿಂದ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಆಡಳಿತ ಮಂಡಳಿಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿರುವ ಮುಖ್ಯಾಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದರು.

ಇದೆ ಸಂದರ್ಭದಲ್ಲಿ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ವತಿಯಿಂದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ನರೇಗಲ್ಲದಿಂದ ಯರೇಹಂಚಿನಾಳ ವರೆಗಿನ 7.710 ಕಿ.ಮೀ ರಸ್ತೆ ಅಭಿವೃದ್ಧಿಗೆ, ಜಿ.ಪಂ 10 ಲಕ್ಷ ಅನುದಾನದಲ್ಲಿ ರೈತ ಸಂಪರ್ಕ ಕೇಂದ್ರದ ಉಗ್ರಾಣದ ಭೂಮಿ ಪೂಜೆ ನೆರವೇರಿಸಲಾಯಿತು. ಪ.ಪಂ ಅಧ್ಯಕ್ಷ ಕಲ್ಮೇಶ ತೊಂಡಿಹಾಳ, ಉಪಾಧ್ಯಕ್ಷೆ ಶಿವಮ್ಮ ಬಾದನಟ್ಟಿ, ಸದಸ್ಯರಾದ ಶಶಿಧರ ಸಂಕನಗೌಡ್ರ, ಯಲ್ಲಪ್ಪ ಮಣ್ಣವಡ್ಡರ, ಖಾದರಬಾಷಾ ಹೂಲಗೇರಿ, ರಾಮಣ್ಣ ಸಕ್ರೋಜಿ, ಶರಣಪ್ಪ ಜುಟ್ಲ, ವಕೀಲ ವಿ.ಆರ್. ಗುಡಿಸಾಗರ, ವಿ.ಬಿ. ಸೋಮನಕಟ್ಟಿಮಠ, ಬಸವರಾಜ ನವಲಗುಂದ, ಯುಸುಫ್ ಇಟಗಿ, ಎಪಿಎಂಸಿ ಸದಸ್ಯ ನಿಂಗನಗೌಡ ಲಕ್ಕನಗೌಡ್ರ ಸೇರಿದಂತೆ ಪ.ಪಂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಪ.ಪಂ ಸಿಬ್ಬಂದಿ ಎಸ್.ಎ. ಜಕ್ಕಲಿ ನಿರ್ವಹಿಸಿದರು.

loading...