ಪರೀಕ್ಷೆಯಲ್ಲಿ ನಕಲು ಮಾಡುವ ಕೆಟ್ಟ ಪರಂಪರೆ ಅಳಿಸಿ: ಸುಮಂಗಲಾ

0
13
loading...

ಕನ್ನಡಮ್ಮ ಸುದ್ದಿ – ಧಾರವಾಡ: ಮಾರ್ಚ 23 ರಿಂದ ಆರಂಭಗೊಳ್ಳಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಸಂರಕ್ಷಣೆಗೆ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಪರೀಕ್ಷಾ ಪೂರ್ವ ಹಾಗೂ ಪರೀಕ್ಷೆಯ ದಿನದಂದು ಪ್ರಶ್ನೆ ಪತ್ರಿಕೆ ಬಹಿರಂಗವಾದರೆ ಉಗ್ರಕ್ರಮ ಕೈಕೊಳ್ಳಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ. ಸುಮಂಗಲಾ ತಿಳಿಸಿದರು. ಡಯಟ್‌ದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಾರ್ಯಾಲಯ ಹಾಗೂ ಡಿಡಿಪಿಐ ಕಛೇರಿಯ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪೂರ್ವ ಸಿದ್ಧತೆ ಮತ್ತು ಪರೀಕ್ಷೆಯನ್ನು ಪಾರದರ್ಶಕ ನೆಲೆಯಲ್ಲಿ ನಿರ್ವಹಿಸುವÀ ಕುರಿತು ಬೆಳಗಾವಿ ವಿಭಾಗ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದರು.
ವಾಟ್ಸ ಆ್ಯಪ್‌ ಮೂಲಕ ಪ್ರಶ್ನೆ ಪತ್ರಿಕೆಗಳು ಬಹಿರಂಗಗೊಳ್ಳುವ ಸಾಧ್ಯತೆ ಇದ್ದು, ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್‌ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಪ್ರಶ್ನೆಪತ್ರಿಕೆಗಳನ್ನು ಪಡೆಯುವಾಗ ವಿಷಯವಾರು, ದಿನಾಂಕವಾರು ಹಾಗೂ ಮಾಧ್ಯಮವಾರು ಸೂಕ್ತ ಪರಿಶೀಲನೆ ಅತೀ ಅಗತ್ಯವಾಗಿದೆ. ಖಜಾನೆಗಳಿಂದ ಪ್ರಶ್ನೆಪತ್ರಿಕೆ ಸಾಗಾಟಕ್ಕೆ ಸೂಕ್ತ ಪೋಲೀಸ್‌ ಭದ್ರತೆಯನ್ನು ಪಡೆದುಕೊಳ್ಳಬೇಕು ಎಂದರು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಕೆ ಕಡ್ಡಾಯವಾಗಿದ್ದು, ಈ ಕುರಿತು ಎಲ್ಲಾ ಹಂತದ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳನ್ನು ಪರಿಶೀಲನೆ ಮಾಡಿ ಸಿಸಿ ಟಿವಿ ಅಳವಡಿಕೆಯನ್ನು ಖಚಿತಪಡಿಸಿಕೊಳ್ಳಬೇಕು.
ಪರೀಕ್ಷಾ ಕೇಂದ್ರದ ಎಲ್ಲ ಸಿಬ್ಬಂದಿಗೂ ಗುರುತಿನ ಚೀಟಿ ನೀಡಲಾಗುತ್ತಿದ್ದು, ಗುರುತಿನ ಚೀಟಿ ಇಲ್ಲದೇ ಇರುವವರನ್ನು ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನೀಡಬಾರದು. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್‌ ವ್ಯಾಪ್ತಿಯಲ್ಲಿ ಪರೀಕ್ಷಾ ಸಮಯದಲ್ಲಿ ಯಾವುದೇ ಝರಾಕ್ಸ ಅಂಗಡಿಗಳು ಕಾರ್ಯನಿರ್ವಹಿಸದಂತೆ ಕ್ರಮಕೈಕೊಳ್ಳಬೇಕು ಎಂದು ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರಿ ಅಪರ ಆಯುಕ್ತ ಡಾ. ಬಿ.ಕೆ.ಎಸ್‌. ವರ್ಧನ್‌ ಮಾತನಾಡಿ, ಎಸ್ಸೆಸ್ಸೆಲ್ಲಿ ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಇಲಾಖೆಯ ಎಲ್ಲ ಅಧಿಕಾರಿಗಳು ಪೂರ್ಣ ಬದ್ಧತೆಯಿಂದ ಶ್ರಮಿಸಬೇಕು. ನಕಲು ಮಾಡುವ ಕೆಟ್ಟ ಪರಂಪರೆ ಅಳಿಸಿ, ವಿದ್ಯಾರ್ಥಿಗಳು ಜೀವನದಲ್ಲಿ ಫೇಲ್‌ ಆಗದಂತೆ ಅವರಲ್ಲಿ ಮೌಲಿಕ ಬದುಕು ರೂಪಿಸುವ ಅಗತ್ಯವಿದೆ. ಎಸ್ಸೆಸ್ಸೆಲ್ಲಿ ಪರೀಕ್ಷೆಯ ನೋಡಲ್‌ ಅಧಿಕಾರಿಗಳು ಪರೀಕ್ಷಾ ಸುಧಾರಣೆಗೆ ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಲು ತಮ್ಮದೇ ಆದ ವಿಧಾನಗಳನ್ನು ಅನುಸರಿಸಿ ಯಾವುದೇ ಅಹಿತಕರ ಘಟನೆಗಳು ಪರೀಕ್ಷಾ ಸಮಯದಲ್ಲಿ ನಡೆಯದಂತೆ ನೋಡಿಕೊಳ್ಳಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗೀಯ ಜಂಟಿ ನಿರ್ದೇಶಕ ಪ್ರಸನ್ನಕುಮಾರ ಮಾತನಾಡಿ, ಪ್ರತೀ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಹಿರಿತನದಲ್ಲಿ ಜಿಲ್ಲಾ ಪಂಚಾಯತ್‌ ಸಿಇಓ, ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಇತರೇ ಅಧಿಕಾರಿಗಳನ್ನೊಳಗೊಂಡು ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯ ಯಶಸ್ವೀ ನಿರ್ವಹಣೆಗೆ ಪೂರಕವಾದ ಚಿಂತನೆಯನ್ನು ಕೈಕೊಳ್ಳಬೇಕು. ಜಿಲ್ಲೆ ಮತ್ತು ತಾಲೂಕು ಹಂತಗಳಲ್ಲಿ ವಿಚಕ್ಷಕದಳಗಳನ್ನು ನೇಮಕಗೊಳಿಸಿ ಪರೀಕ್ಷಾ ಕೇಂದ್ರಗಳಲ್ಲಿ ಸಾಮೂಹಿಕ ನಕಲು ಆಗದಂತೆ ಅಗತ್ಯ ಬಿಗಿ ಕ್ರಮಕೈಕೊಳ್ಳಬೇಕು ಎಂದರು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಹಿರಿಯ ಸಹಾಯಕ ನಿರ್ದೇಶಕರುಗಳಾದ ಶೇಖರಪ್ಪ ಮತ್ತು ಉಮಾ, ಅಪರ ಆಯುಕ್ತರ ಕಛೇರಿಯ ಹಿರಿಯ ಸಹಾಯಕ ನಿರ್ದೇಶಕ ಆರ್‌.ಎಸ್‌. ಮುಳ್ಳೂರ, ವಿಜಯಪೂರ, ಬಾಗಲಕೋಟ, ಬೆಳಗಾವಿ, ಧಾರವಾಡ, ಗದಗ, ಉತ್ತರಕನ್ನಡ, ಹಾವೇರಿ, ಚಿಕ್ಕೋಡಿ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐ, ಡಯಟ್‌ ಪ್ರಾಚಾರ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ನೋಡಲ್‌ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಡಿಡಿಪಿಐ ಎನ್‌.ಎಚ್‌. ನಾಗೂರ ಸ್ವಾಗತಿಸಿದರು. ಗುರುಮೂರ್ತಿ ಯರಗಂಬಳಿಮಠ ನಿರೂಪಿಸಿದರು. ಡಯಟ್‌ ಪ್ರಿನ್ಸಿಪಾಲ್‌ ಸುಮಂಗಳಾ ಕುಚಿನಾಡ ವಂದಿಸಿದರು.

loading...