ಪ್ರಚಾರಪ್ರಿಯ ಬಿಜೆಪಿಯಿಂದ ಅಭಿವೃದ್ಧಿ ಅಸಾಧ್ಯ: ಜಾರಕಿಹೊಳಿ

0
21
loading...

ಕುಷ್ಟಗಿ: ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡುವುದನ್ನು ಬಿಟ್ಟು ಬರೀ ಪ್ರಚಾರಕ್ಕಾಗಿ ಹೆಚ್ಚು ಒತ್ತು ನೀಡುವ ಬಿಜೆಪಿ ಪಕ್ಷದಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದ ತಾವರಗೇರಾ ರಸ್ತೆಯಲ್ಲಿರುವ ಟಿಎಪಿಸಿಎಂಎಸ್ ಬಯಲು ಜಾಗೆಯಲ್ಲಿ ಶುಕ್ರವಾರದಂದು ಕೆಪಿಸಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹನಮಸಾಗರ-ಕುಷ್ಟಗಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡುತ್ತಾ ಬಿಜೆಪಿ ಈ ರಾಜ್ಯದ ಮತ್ತು ಈ ದೇಶದ ಜನತೆಯ ಮುಂದೆ ಹುಸಿ ಭರವಸೆಗಳನ್ನು ನೀಡುತ್ತಾ ಕೇಂದ್ರ ಸರಕಾರ ಜನತೆಗೆ ಮಂಕುಬೂದಿ ಎರಚಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಮಾಡಿದ ಯೋಜನೆಗಳನ್ನೆ ಹೆಸರು ಬದಲಾಯಿಸಿ ಬಿಜೆಪಿ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ನಿರ್ಮಲಭಾರತವನ್ನು ಸ್ವಚ್ಚ ಭಾರತ ಎಂದು ಮಾಡಿ ತಮ್ಮ ಯೋಜನೆಯೆಂದು ಪ್ರಚಾರ ಪಡೆಯುತ್ತಿದ್ದಾರೆ. ನಾವು ಬಿಜೆಪಿಯಂತೆ ಅಲ್ಲ. ಈ ದೇಶದಲ್ಲೆ ಚುನಾವಣೆ ಪೂರ್ವದಲ್ಲಿ ನೀಡಿದಂತಹ ಪ್ರಣಾಳಿಕೆಯಲ್ಲಿನ ಬಹುತೇಕ ಎಲ್ಲ ಆಶ್ವಾಸನೆಗಳನ್ನು ಈಡೇರಿಸಿದ ಸರಕಾರ ಎಂದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ. ಕಳೆದ ಐದು ವರ್ಷಗಳಲ್ಲಿ ನುಡಿದಂತೆ ನಡೆದ ಸರಕಾರ ಎಂದರೆ ಅದು ಜನಾನುರಾಗಿ ಕಾಂಗ್ರೆಸ್ ಸರಕಾರವಾಗಿದೆ. ಬಿಜೆಪಿಯು ಕೇವಲ ಅಧಿಕಾರದ ದಾಹಕ್ಕಾಗಿ ಈ ಈ ರಾಜ್ಯದಲ್ಲಿ ರೈತರ ಹೆಸರಿನ ಮೇಲೆ ಅಧಿಕಾರಕ್ಕೆ ಬಂತು. ಆದರೆ ಯಡಿಯೂರಪ್ಪ ಬರೀ ಬ್ರಷ್ಟಾಚಾರದಲ್ಲೇ ಮುಳುಗಿ ಜೈಲಿಗೆ ಹೋದರು ಅವರಷ್ಟೇ ಅಲ್ಲದೇ ಅವರ ಹಿಂಬಾಲಕರು ಸಚಿವರು ಸಹ ಜೈಲಿಗೆ ಹೋದರು. ಇದರಿಂದ ಜನತೆ ಬಯಸುವ ಸುಭದ್ರ, ಜನಪರ ಆಡಳಿತವನ್ನು ನೀಡಲು ಬಿಜೆಪಿಗಾಗಲೀ, ಜೆಡಿಎಸ್‍ಗಾಗಲೀ ಇಲ್ಲ. ಅದು ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಆದ್ದರಿಂದ ಕುಷ್ಟಗಿಯಲ್ಲಿ ಅಮರೇಗೌಡ ಬಯ್ಯಾಪುರ ಅವರೇ ಮುಂದಿನ ಶಾಸಕರಾಗಲಿದ್ದು ಅಭಿವೃದ್ಧಿಗೆ ಕೈಜೋಡಿಸಿ ಎಂದು ಹೇಳಿದರು.
ಇದೇ ವೇಳೆ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಮಾತನಾಡಿ ಕಾಂಗ್ರೆಸ್ ಪಕ್ಷವು ದೀನ ದಲಿತರ, ಶೋಷಿತರ, ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಇರುವ ಪಕ್ಷವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಈ ರಾಜ್ಯದ ಎಲ್ಲಾ ವರ್ಗದವರಿಗೂ ಅನೇಕ ಭಾಗ್ಯಗಳ ಯೋಜನೆಗಳನ್ನು ರೂಪಿಸಿ ಅನುಕೂಲ ಪಡೆಯುವಂತೆ ಮಾಡಿದ್ದಾರೆ. ಬ್ರಷ್ಟಾಚಾರದಲ್ಲಿ ಮುಳುಗಿ ಹೋದ ಬಿಜೆಪಿಗಾಗಲೀ, ಕುಟುಂಬ ರಾಜಕೀಯದ ಜೆಡಿಎಸ್ ಆಗಲೀ ಅಭಿವೃದ್ಧಿ ಚಿಂತಕರಲ್ಲ. ಸ್ವಹಿತಾಸಕ್ತಿಗೆ ಅಧಿಕಾರಕ್ಕಾಗಿ ಮಾತ್ರ ಇವರಿಗೆ ರಾಜಕೀಯ ಬೇಕು. ಆದರೆ ಕಾಂಗ್ರೆಸ್ ಪಕ್ಷಕ್ಕೆ ಈ ರಾಜ್ಯದ ಸಮಗ್ರ ಅಭಿವ್ರದ್ಧಿಯೇ ಮೂಲ ಮಂತ್ರವಾಗಿದÀ್ದು ಪ್ರತಿಯೊಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕೆಂದು ಹೇಳಿದರು.

ಇದೇ ವೇಳೆ ಕುಷ್ಟಗಿ ಕ್ಷೇತ್ರದ ಅಭ್ಯರ್ಥಿ ಅಮರೇಗೌಡ ಬಯ್ಯಾಫುರ ಕಾರ್ಯಕರ್ತರನ್ನುದ್ದೇಶಿಸಿ ಪ್ರಸ್ತಾವಿಕವಾಗಿ ಮಾತನಾಡಿ ಕ್ಷೇತ್ರದಾಧ್ಯಂತ ಎಲ್ಲಾ ಗ್ರಾಮಗಳ ಕಾರ್ಯಕರ್ತರು ಸತತ ಸಂಪರ್ಕದಲ್ಲಿದ್ದಾರೆ. ಅವರಿಗೆ ನಮ್ಮ ಬೂತ್ ನಮ್ಮ ಹೊಣೆ ಎಂದು ಜವಾಬ್ದಾರಿ ನೀಡಲಾಗಿದೆ. ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡುವ ವಿಶ್ವಾಸವಿದ್ದು ಈ ಬಾರಿ ನನ್ನ ಗೆಲುವು ಕಾರ್ಯಕರ್ತರ ಗೆಲುವಾಗಲಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹಸನಸಾಬ ದೋಟಿಹಾಳ, ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಹನಮಸಾಗರ ಅಧ್ಯಕ್ಷ ಚಂದಪ್ಪ ತಳವಾರ, ಶೇಖರಗೌಡ ಮಾಲಿಪಾಟೀಲ, ಜಿ.ಪಂ. ಸದಸ್ಯ ಹನಮಗೌಡ ಪೊ.ಪಾಟೀಲ, ಬಸವಂತರಾಯಪ್ಪ ಕುರಿ, ಪಾಮಯ್ಯ ಮುರಾರಿ, ಮಹಿಳಾ ಘಟದ ಅಧ್ಯಕ್ಷೆ ಶಕುಂತಲಾ ಹಿರೇಮಠ, ಭಾರತೀ ನೀರಗೇರಿ, ಮಾಜಿ.ಜಿ.ಪಂ. ಸದಸ್ಯ ಪರಸಪ್ಪ ಕತ್ತಿ, ಹನಮಂತಪ್ಪ ಚೌಡ್ಕಿ, ವಸಂತ ಮೇಲಿನಮನಿ, ಬಸವರಾಜ ಕುದ್ರಿಮೋತಿ, ಬಸಣ್ಣ ಗೋನಾಳ, ತಾಜುದ್ದೀನ ದಳಪತಿ, ಪರಶುರಾಮ ನಾಗರಾಳ, ಯಲ್ಲಪ್ಪ ಬಾಗಲಿ, ರಜಾಕ ಸುಳ್ಳದ ಸೇರಿದಂತೆ ಅನೇಕ ಮುಖಂಡರು ಇದ್ದರು.

loading...