ಪ್ರಥಮ ಸ್ಥಾನ ಪಡೆದ ಭಾರದ್ವಾಜ ತಂಡದ ವಿದಾರ್ಥಿಗಳು

0
18
loading...

ಕನ್ನಡಮ್ಮ ಸುದ್ದಿ-ಶಿರಸಿ: ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರವು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಹಯೋಗದಲ್ಲಿ ಪದವಿ ವಿದಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಶಿರಸಿಯ ಎಂ.ಇ.ಎಸ್‌. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಣವ್‌ ಭಾರದ್ವಾಜ ನೇತೃತ್ವದ ತಂಡ ಪ್ರಥಮ ಸ್ಥಾನ ಪಡೆದಿದೆ.
ಧಾರವಾಡದ ರಂಗಾಯಣದಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯದ 7 ಜಿಲ್ಲೆಗಳ ನಾಟಕ ತಂಡ ಪಾಲ್ಗೊಂಡಿತ್ತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಗೂ 7 ಸಾವಿರ ರೂ ನಗದು ಪುರಸ್ಕಾರ ಪಡೆಯುವ ಜೊತೆಗೆ ಪ್ರಣವ್‌ ಭಾರದ್ವಾಜ ಅವರಿಗೆ ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ಕಥೆ ಪ್ರಶಸ್ತಿ ದೊರೆಯಿತು. ಅತ್ಯುತ್ತಮ ನಟ ಪ್ರಶಸ್ತಿ ಅರುಣ ಮುಚ್ಚಂಡಿ ಪಾಲಾಯ್ತು. ‘ವನ್ಯಜೀವಿ ಸಂರಕ್ಷಣೆ’ಯೆಂಬ ನಾಟಕದ ಮುಖ್ಯ ವಿಷಯದಡಿಯಲ್ಲಿ ‘ಭಾಳ ಬಾಳಿದ್ದೀರಿ…ಬಾಳಗೊಡಿರಿ’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರದರ್ಶಿಸಿದ ಈ ನಾಟಕದಲ್ಲಿ ಕಾಲೇಜಿನ ಬಿ.ಎಸ್ಸಿ. ಪ್ರಣವ್‌ ಭಾರದ್ವಾಜ, ಅರುಣ ಮುಚ್ಚಂಡಿ, ನಿಖಿಲ್‌ ಕೆ., ಸಿಂಧು ಹೆಗಡೆ, ದಿವ್ಯಾ ನಾಯ್ಕ, ಪವಿತ್ರಾ ಹೆಗಡೆ, ಅಕ್ಷತಾ ಹೆಗಡೆ ಮತ್ತು ಅರವಿಂದ ಸ್ವಾಮಿ ಇವರು ಪ್ರಮುಖ ಪಾತ್ರವರ್ಗದಲ್ಲಿದ್ದರು. ಸಂಗೀತಕ್ಕೆ ಪ್ರವೀಣ ಹೆಗಡೆ, ಪ್ರಮೋದ ಕುಮಾರ್‌ ಮತ್ತು ಸೂರಜ್‌ ನಾಯಕ್‌, ನೈದಿಲೆ ಹೆಗಡೆ ಇವರು ಸಹಕರಿಸಿದರು. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಸಾದನ ವ್ಯವಸ್ಥೆ ಹಾಗೂ ಮಾರ್ಗದರ್ಶನವನ್ನು ರಂಗಕರ್ಮಿಗಳಾದ ಚಂದ್ರು ಉಡುಪಿ ನೀಡಿದ್ದರು.

loading...