ಬಡವರಿಗೆ ಮನೆ ನಿರ್ಮಿಸಿಕೊಡಲು 22 ಕೋಟಿ ರೂ ಅನುದಾನ !

0
10
loading...

ಕನ್ನಡಮ್ಮ ಸುದ್ದಿ-ನರಗುಂದ: ಪ್ರಧಾನಮಂತ್ರಿ ಅವಾಸ್ ಯೋಜನೆಯ ಅರ್ಪೂಡೆಬಲ್ ಹೌಸಿಂಗ್ ಇನ್ ಪಾರ್ಟನರ್‍ಶಿಫ್ ಉಪಘಟಕದಡಿ ಪಟ್ಟಣದಲ್ಲಿ ಅನುಮೋದನೆಗೊಂಡಿರುವ ಬಡವರಿಗೆ ವಿತರಿಸುವ 2000 ಮನೆಗಳನ್ನು ನಿರ್ಮಿಸುವ ಯೋಜನೆಗೆ ಪುರಸಭೆ ಸ್ಥಳೀಯ ಪಾಲಿನ ಅನುದಾನ 22 ಕೋಟಿ ರೂ ನೀಡಬೇಕಿದೆ ಎಂದು ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಲಾಯಿತು. ಇದಕ್ಕೆ ಉತ್ತರಿಸಿದ ಪುರಸಭೆ ಅಧ್ಯಕ್ಷ ಶಿವಾನಂದ ಮುತವಾಡ, ಪುರಸಭೆಯು ಪ್ರಸಕ್ತ ದಿನಗಳಲ್ಲಿ ಹೆಚ್ಚಿನ ಆದಾಯ ಹೊಂದಿಲ್ಲ. ಪುರಸಭೆಯ ಸಿಬ್ಬಂಧಿಗೆ ವೇತನ ನೀಡುವುದು ಸಧ್ಯದಲ್ಲಿ ತೊಂದರೆಯಾಗಿದೆ. ಹೀಗಾಗಿ ಶಾಸಕರಾದ ಯಾವಗಲ್ ಅವರೇ ಹೆಚ್ಚಿನ ಅನುದಾನ ಸರ್ಕಾರದಿಂದ ತರುವ ಮೂಲಕ ಈ ಯೋಜನೆ ಕೈಗೊಳ್ಳಬೇಕಾಗಿದೆ. ಈ ಪ್ರಸ್ತಾವಣೆಗೆ ನಮ್ಮ ಸಹಮತವಿಲ್ಲವೆಂದು ತಿಳಿಸಿದರು.

ಪುರಸಭೆ ಸಾಮಾನ್ಯ ಸಭೆ ಬುಧವಾರ ನಡೆದ ಸಂದರ್ಭದಲ್ಲಿ ಅಧ್ಯಕ್ಷರು ಈ ವಿಷಯ ಪ್ರಸ್ತಾಪಿಸಿದರು. ಇದು ಸರ್ಕಾರದ ಮಹತ್ವದ ಯೋಜನೆಯಾಗಿದ್ದು ಇಲ್ಲವೆಂದರೆ ಹೇಗೆ ಅದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದರಿಂದ ಪುರಸಭೆ ಇದನ್ನು ತಿರಸ್ಕರಿಸಲು ಬರದು. ಆದ್ದರಿಂದ ಈ ಪ್ರಸ್ತಾವಣೆ ಕುರಿತು ಹೆಚ್ಚಿನ ಚರ್ಚೆಮಾಡಿ ಸಮ್ಮತಿ ನೀಡುವುದು ಅಗತ್ಯವೆಂದು ಕಾಂಗ್ರೆಸ್ ಬೆಂಬಲಿತ ಪುರಸಭೆ ಸದಸ್ಯ ರಾಜು ಕಲಾಲ ತಿಳಿಸಿದ್ದರಿಂದ, ಅಧ್ಯಕ್ಷ ಹಾಗೂ ರಾಜು ಕಲಾಲ ಮಧ್ಯ ಕೆಲ ಸಮಯ ಕಾವೇರಿದ ಜಟಾಪಟಿ ನಡೆಯಿತು. ಮುಖ್ಯಾಧಿಕಾರಿ ಎನ್.ಎಸ್. ಪೆಂಡಸೆ ಮಧ್ಯ ಪ್ರವೇಶಿಸಿ ಮಾತನಾಡಿ ಗೊಂದಲಕ್ಕೆ ತೆರೆಎಳೆದರು.
ಇಷ್ಟಕ್ಕೂ ಸುಮ್ಮನಾಗದ ಪುರಸಭೆ ಅಧ್ಯಕ್ಷ ಶಿವಾನಂದ ಮುತವಾಡ, ಈ ಹಿಂದೆ ಕಾಂಗ್ರೆಸ್ ಬೆಂಬಲಿತರ ಅಧಿಕಾರ ಪುರಸಭೆಯಲ್ಲಿದ್ದಾಗ ನೈಜ ಬಡಫಲಾನುಭವಿಗಳ 1326 ಜನತೆಯ ಮನೆಗಳನ್ನು ರದ್ದು ಮಾಡಿದ್ದೀರಿ. ಯಾರನ್ನೂ ಕೇಳಿ ರದ್ದು ಪಡಿಸಿದ್ದೀರಿ. ಆಗಿನ ವಸತಿ ಯೋಜನೆಯ ಕುರಿತಾಗಿ ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಅರ್ಹ ಮನೆದೊರೆಯಬೇಕಾದ ಜನತೆಯ ಮನೆಗಳನ್ನು ರದ್ದುಪಡಿಸಿದ್ದೀರಿ. ಈಗ ಅರ್ಹರಿಗೆ ಮನೆಗಳನ್ನು ವಿತರಿಸುವ ಕಾರ್ಯಕ್ಕೆ ಸ್ಥಳಿಯ ಪುರಸಭೆಯ ಪಾಲಿನ ಅನುದಾನ ಕೇಳುತಿದ್ದೀರೆಂದು ಸಭೆಯಲ್ಲಿ ಕೋಪವ್ಯಕ್ತಪಡಿಸಿದರು. ಇದಕ್ಕೆ ಸುಮ್ಮನಾಗದೇ ಸದಸ್ಯ ರಾಜುಕಲಾಲ ಮಧ್ಯ ಪ್ರವೇಶಿಸಿ ಮಾತನಾಡಿ, ಮನೆ ಇದ್ದವರಿಗೆ ಹೊಲ ಇದ್ದವರ ಹೆಸರಿನ ಪಟ್ಟಿ ಆಗ ಬಿಜೆಪಿ ಬೆಂಬಲಿತ ಕೆಲ ಸದಸ್ಯರು ತಯಾರಿಸಿದ್ದರಿಂದ ಆಗಿನ ಸಂದರ್ಭದಲ್ಲಿ ಮನೆಗಳ ಪಟ್ಟಿ ಅರ್ಹವಾಗಿಲ್ಲವೆಂದು ಪಟ್ಟಿಯಲ್ಲಿ ಕೆಲ ಜನರ ಹೆಸರನ್ನು ಅನರ್ಹಗೊಳಿಸಲಾಗಿತ್ತು ಎಂದು ತಿಳಿಸಿದರು. ಪುನಹ ಮಾತಿಗೆ ಮಾತು ಬೆಳೆದು ರಾಧಾಂತವಾಗುವ ಸಂದರ್ಭವರಿತ ಮುಖ್ಯಾಧಿಕಾರಿಗಳು ಪುನಹ ಪರಿಸ್ಥಿತಿ ನಿಯಂತ್ರಿಸಿದರು.

2013-14 ನೇ ಸಾಲಿನ ಕಾಮಗಾರಿಯಲ್ಲಿ ಶೇ. 3 ರ ಅನುದಾನದಲ್ಲಿ ಬಾಕಿ ಉಳಿದ 2.98 ಲಕ್ಷರೂ ಗಳಿಗೆ ಮರುಕ್ರಿಯಾ ಯೋಜನೆ ತಯಾರಿಸುವ ಕುರಿತಂತೆ ನಡೆದ ಚರ್ಚೆ ಸಂದರ್ಭದಲ್ಲಿ, ಸಧ್ಯದ ಸ್ಥಿತಿಯಲ್ಲಿ ಆನ್‍ಲೈನ್ ಪದ್ದತಿ ಇರುವುದರಿಂದ ಈ ಅನುದಾನ ಸದ್ಬಳಿಕೆ ಮಾಡಿಕೊಳ್ಳುವುದು ಅಗತ್ಯವಿದೆ. ಈ ಅನುದಾನದಲ್ಲಿ ಅಂಗವಿಕಲರಿಗೆ ಬ್ಯಾಟರಿ ಚಾಲಿತ ತ್ರೀಚಕ್ರವಾಹಣ ವಿತರಿಸುವ ಕುರಿತು ನಿಯೋಜಿತವಾದ ಕಾರ್ಯಕ್ರಮವಾಗಿದ್ದು ಹಾಗೂ ಮರು ಕ್ರಿಯಾ ಯೋಜನೆಯಲ್ಲಿ ಸೌಚಾಲಯಗಳ ನಿರ್ಮಾಣಕ್ಕೆ ಆಧ್ಯತೆ ಮತ್ತು ಎಸ್‍ಸಿ, ಎಸ್‍ಟಿ ಪ್ರದೇಶದಲ್ಲಿ ಎಲ್‍ಇಡಿ ಲೈಟ್‍ಗಳ ಅಳವಡಿಕೆಗೆ ಅನುದಾನ ಉಪಯೋಗಿಸಬಹುದಾಗಿದೆ ಎಂದು ಮುಖ್ಯಾಧಿಕಾರಿಗಳು ವಿಷಯದ ವಿವರ ನೀಡಿದ್ದರಿಂದ ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಲಾಯಿತು.
ನಗರೋತ್ಥಾನ ಯೋಜನೆಯಡಿ ಅನುದಾನ ಆಗಾಗ ಪುರಸಭೆಗೆ ಒದಗುತಿದ್ದರೂ ಸರಿಯಾಗಿ ಕಾಮಗಾರಿಗಳು ವಿವಿಧ ವಾರ್ಡುಗಳಲ್ಲಿ ನಡೆಯುತಿಲ್ಲ. 3 ನೇ ವಾರ್ಡಿಗೆ ಸಂಬಂಧಿಸಿದಂತೆ ಮತ್ತು ಆ ಭಾಗಕ್ಕೆ ಹೊಂದಿಕೊಂಡ 7,8 ಮತ್ತು 9 ನೇ ವಾರ್ಡುಗಳ ವ್ಯಾಪ್ತಿಯಲ್ಲಿ ಬರುವ ವೆಂಕಟೇಶ್ವರ ದೇವಸ್ಥಾನದ ಬದಿಯಲ್ಲಿಯ ರಸ್ತೆಗಳು ಸಮರ್ಪಕವಾಗಿಲ್ಲ. ಅವುಗಳನ್ನು ದುರಸ್ತಿ ಕೂಡಾ ಮಾಡಲು ಅಡಳಿತ ಮಂಡಳಿ ಎಚ್ಚರವಹಿಸಿ ಕಾರ್ಯ ವಿಫಲವಾಗದಂತೆ ನೋಡಿಕೊಳ್ಳಬೇಕೆಂದು ಪುರಸಭೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಕುಡೇನವರ ಸಭೆಯಲ್ಲಿ ವಿವರಿಸಿದರು.

2018-19 ನೇ ಸಾಲಿನ ಕಾರ್ಯಾಲಯದ ವಿವಿಧ ವಿಭಾಗಗಳಿಗೆ ಬೇಕಾಗುವ ಸಾಮಗ್ರಿ ಹಾಗು ಬಿಡಿಭಾಗಗಳ ಖರೀಧಿಗಾಗಿ ವಾರ್ಷಿಕ ಟೆಂಡರ್ ಕರೆಯುವ ಕುರಿತು ಸಭೆಯಲ್ಲಿ ಮಂಡಿಸಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಎನ್.ಎಸ್. ಪೆಂಡಸೆ, ಪುರಸಭೆ ಅಧ್ಯಕ್ಷ ಶಿವಾನಂದ ಮುತವಾಡ, ಪುರಸಭೆ ಉಪಾಧ್ಯಕ್ಷೆ ರೇಣುಕಾ ಕೋರಿ, ಪುರಸಭೆ ಸದಸ್ಯರಾದ ವಸಂತ ಜೋಗಣ್ಣವರ, ಕಿರಣ ಮುಧೋಳೆ, ಚಂದ್ರು ಪವಾರ, ಮಹೇಶ ಬಡಿಗೇರ, ಸಾವಿತ್ರಿ ಹಟ್ಟಿ, ಶಾಂತಾ ಭಜಂತ್ರಿ, ಬಸವಣ್ಣೆವ್ವ ಪಿಡ್ನಾಯ್ಕರ್, ಮಮ್ತಾಜ ಸವಟಗಿ, ಪುಂಡಲೀಕಪ್ಪ ಹುಲಜೋಗಿ, ರಫೀಕ ಧಾರವಾಡ, ವಿಠಲ ಹಡಗಲಿ. ಬಿ.ಎ. ನದಾಫ್, ಮಹೇಶ ಹಡಪದ ಉಪಸ್ಥಿತರಿದ್ದರು.

loading...