ಬಯೋಮೆಟ್ರಿಕ್‌ ಹಿಂದಿನ ವ್ಯವಸ್ಥೆಯನ್ನೇ ಮುಂದುವರಿಸಲು ಆಗ್ರಹ

0
33
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಗ್ರಾಮೀಣ ಭಾಗದ ಜನರು ಪಡಿತರ ಸಾಮಗ್ರಿ ಪಡೆಯಲು ವಾರಗಟ್ಟಲೆ ಕಾಯುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಇಂಟರ್‌ನೆಟ್‌ ಸಮಸ್ಯೆಯಿಂದಾಗಿ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಲು ಸಾಧ್ಯವಾಗದ ಕಾರಣ ಅದನ್ನು ಕೈಬಿಡಬೇಕು. ಹಿಂದಿನ ವ್ಯವಸ್ಥೆಯನ್ನೇ ಮುಂದುವರಿಸಬೇಕೆಂದು ಕೆಲ ಸದಸ್ಯರು ಆಗ್ರಹಿಸಿದರು.
ಬುಧವಾರ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಅಧ್ಯಕ್ಷೆ ಭವ್ಯಾ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಈ ವಿಷಯ ಪ್ರಸ್ತಾಪಿಸಿದರು. ಪಶು ಸಂಗೋಪನಾ ಇಲಾಖೆಯಿಂದ ಕಿರವತ್ತಿ ಸಮೀಪದ ಹೊಸಳ್ಳಿಯಲ್ಲಿ ನಡೆಸಿದ ಜಾನುವಾರು ಪ್ರದರ್ಶನದಲ್ಲಿ ಅಧಿಕಾರಿಗಳಿಂದ ರೈತರಿಗೆ ಅವಮಾನವಾಗಿದೆ ಎಂದು ಸದಸ್ಯೆ ಮಾಲಾ ಚಂದಾವರ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕಿನ ಬೇರೆ ಕಡೆಗಳಲ್ಲಿ ಉತ್ತಮವಾಗಿ ಜಾನುವಾರು ಪ್ರದರ್ಶನ ನಡೆಸಿರುವ ಇಲಾಖೆ ಹೊಸಳ್ಳಿಯಲ್ಲಿ ತಾರತಮ್ಯ ಮಾಡಿರುವುದೇಕೆ ಎಂದು ಅಧ್ಯಕ್ಷೆ ಭವ್ಯಾ ಶೆಟ್ಟಿ ಪ್ರಶ್ನಿಸಿದರು. ಅಧಿಕಾರಿ ಶ್ರೀನಿವಾಸ ಪಾಟೀಲ ಪ್ರತಿಕ್ರಿಯಿಸಿ, ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಸದಸ್ಯ ನಟರಾಜ ಗೌಡರ್‌ ಮಾತನಾಡಿ, ತಾಲ್ಲೂಕಿನ ವಿವಿಧೆಡೆ ಜೂಜಾಟ, ಗಾಂಜಾ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಅಕ್ರಮ ಚಟುವಟಿಕೆಗಳು ಇತ್ತೀಚಿನ ದಿವಸಗಳಲ್ಲಿ ಹೆಚ್ಚುತ್ತಿರುವುದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಾತ್ರಾ ಸಂದರ್ಭದಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಜೂಜಾಟ ಎಗ್ಗಿಲ್ಲದೇ ನಡೆದಿದ್ದು, ಅದನ್ನು ನಿಯಂತ್ರಿಸಬೇಕಾದ ಪೊಲೀಸ್‌ ಇಲಾಖೆ ಮೌನ ವಹಿಸಿದೆ ಎಂದರು. ಇದಕ್ಕೆ ಅಧ್ಯಕ್ಷೆ ಭವ್ಯಾ ಶೆಟ್ಟಿ ಧ್ವನಿಗೂಡಿಸಿ, ಜೂಜಾಟ ನಿಯಂತ್ರಣಕ್ಕೆ ಬಿಗು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಬಂದೂಕು ಲೈಸನ್ಸ್‌ ನವೀಕರಣವನ್ನು ಸರಳೀಕರಣಗೊಳಿಸಬೇಕು. ಇಲ್ಲವಾದರೆ ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ರೈತರಿಗೆ ತೊಂದರೆದಾಯಕವಾಗಿ ಪರಿಣಮಿಸುತ್ತದೆ. ಪೊಲೀಸ್‌ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಲು ಸದಸ್ಯರು ಒತ್ತಾಯಿಸಿದರು. ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಸದಸ್ಯರಾದ ನಾಗರಾಜ ಕವಡಿಕೆರೆ, ರಾಧಾ ಹೆಗಡೆ ಬೆಳಗುಂದ್ಲಿ, ಸುಬ್ಬಣ್ಣ ಬೋಳ್ಮನೆ, ತಾಲ್ಲೂಕ ಪಂಚಾಯ್ತಿ ಇ.ಓ ವಿಠ್ಠಲ್‌ ನಾಟೇಕರ ಮತ್ತಿತರರು ಇದ್ದರು.

loading...