ಬಾಯಿ ಬಡಿದುಕೊಂಡು ಅಣಕು ಶವ ಸುಟ್ಟು ಪ್ರತಿಭಟನೆ

0
22
loading...

ಚಿಕ್ಕೋಡಿ 24: ಪಟ್ಟಣದ ತುಂಬೆಲ್ಲ ಸಿಎಂ ಸಿದ್ದರಾಮಯ್ಯ, ಸಂಸದ ಅಂಗಡಿ ಅವರ ಅಣಕು ಶವಯಾತ್ರೆ ನಡೆಸಿದ ಜಿಲ್ಲಾ ಹೋರಾಟ ಸಮಿತಿ ಮತ್ತು ವಿವಿಧ ಸಂಘಟನೆ ಕಾರ್ಯಕರ್ತರು ಬಸವಸರ್ಕಲ್‌ದಲ್ಲಿ ಶವ ದಹಿಸಿ,ತಿಥಿಯೂಟ ಸವಿದು, ಬೊಬ್ಬೆ ಹೊಡೆದು ಆಕ್ರೋಶ ವ್ಯಕ್ತ ಪಡಿಸಿದರು. ಪಟ್ಟಣದಲ್ಲಿ ಚಿಕ್ಕೋಡಿ ಜಿಲ್ಲಾ ಘೋಷಣೆಗೆ ಒತ್ತಾಯಿಸಿ ಜಿಲ್ಲಾ ಹೋರಾಟ ಸಮಿತಿ ನಡೆಸುತ್ತಿರುವ ಉಪವಾಸ ಧರಣಿ ಸತ್ಯಾಗ್ರಹ 48ನೇ ದಿನಕ್ಕೆ ಕಾಲಿಟ್ಟಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯದಲ್ಲಿರುವ ಕಾಂಗ್ರೆಸ್‌ ಸರಕಾರ ಜಿಲ್ಲೆ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳದೇ ಇರುವುದಕ್ಕೆ ಇಂದು ಅಣಕು ಶವ ಯಾತ್ರೆ ನಡೆಸಲಾಗಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್‌.ಸಂಗಪ್ಪಗೋಳ ಆಕ್ರೋಶ ವ್ಯಕ್ತ ಪಡಿಸಿದರು. ಈ ಭಾಗದ ಜನಪ್ರತಿನಿಗಳು ಒಗ್ಗಟ್ಟಿನ ಶಕ್ತ ಪದರ್ಶಿಸಿ ಸಿಎಂ ಮೇಲೆ ಒತ್ತಡ ತಂದು ಚುನಾವಣೆ ಪೂರ್ವದಲ್ಲಿ ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡದಿದ್ದರೇ ಮುಂದಿನ ದಿನಮಾನದಲ್ಲಿ ಈ ಭಾಗದ ಜನಪ್ರತಿನಿಧಿಗಳ ಶವ ಯಾತ್ರೆಯನ್ನು ಹೊರಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ರೈತ ಸಂಘದ ವಕ್ತಾರ ತ್ಯಾಗರಾಜ ಕದಮ ಮಾತನಾಡಿ, ಚಿಕ್ಕೋಡಿ ಜಿಲ್ಲೆ ಮಾಡದೇ ಸಿಎಂ ಸಿದ್ದರಾಮಯ್ಯನವರು ಬೆಳಗಾವಿ ಜಿಲ್ಲೆಗೆ ಬಂದರೇ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ವಿವಿಧ ಸಂಘಟನೆಗಳು ಸೇರಿಕೊಂಡು ಕಪ್ಪು ಬಾವುಟ ಪ್ರದರ್ಶನ ಮಾಡುವ ಜತೆಗೆ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಕಾಂಗ್ರೆಸ್‌ ನಾಯಕರು ಚಿಕ್ಕೋಡಿ ಜಿಲ್ಲೆ ಮಾಡುವ ಬಗ್ಗೆ ಇಚ್ಚಾಶಕ್ತಿ ಇದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟ ಪಡಿಸಬೇಕು. ಮತ್ತು ಸಿಎಂ ಸಹ ಚಿಕ್ಕೋಡಿ ಜಿಲ್ಲೆ ಬಗ್ಗೆ ಆ ಸಭೆ ಈ ಸಭೆ ಎಂದು ನಾಟಕವಾಡುವುದನ್ನು ನಿಲ್ಲಿಸಬೇಕು. ಕೂಡಲೇ ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡುವ ಮೂಲಕ ಚಿಕ್ಕೋಡಿ ಜಿಲ್ಲಾ ವ್ಯಾಪ್ತಿಯ 25 ಲಕ್ಷ ಜನರಿಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.ಮಾಜಿ ಶಾಸಕ ದತ್ತು ಹಕ್ಯಾಗೋಳ, ಮಲಗೌಡಾ ನೇರ್ಲಿ, ಸಂಜು ಬಡಿಗೇರ, ಅಪ್ಪಾಸಾಬ ಚೌಗಲಾ, ಸುರೇಶ ಬ್ಯಾಕೂಡೆ, ದೊಂಡಿಬಾ ಹಕ್ಯಾಗೋಳ, ಚಂದ್ರಕಾಂತ ಹುಕ್ಕೇರಿ, ಶಶಿಕಾಂತ ಫಕೀರೆ, ಬಸವರಾಜ ಢಾಕೆ, ಮಂಜುನಾಥ ಮಾಳಗೆ, ನಿಜಗುಣಿ ಆಲೂರೆ, ಅಪ್ಪಾಸಾಬ ಕುರಣಿ ಸೇರಿದಂತೆ ಚಿಕ್ಕೋಡಿ ನ್ಯಾಯವಾದಿಗಳು ಉಪಸ್ಥಿತರಿದ್ದರು.

loading...