ಬಾಲ ಕಾರ್ಮಿಕ ಪದ್ಧತಿ ದೇಶದ ಅತಿ ದೊಡ್ಡ ಪಿಡಗು: ಚಿಣ್ಣನ್ನವರ್

0
27
loading...

ಕನ್ನಡಮ್ಮ ಸುದ್ದಿ- ಧಾರವಾಡ: ಬಾಲ ಕಾರ್ಮಿಕ ಪದ್ಧತಿ ದೇಶದ ಅತಿ ದೊಡ್ಡ ಪಿಡುಗಾಗಿದ್ದು, ಪ್ರತಿಯೊಬ್ಬರೂ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪಣ ತೊಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಿಣ್ಣನ್ನವರ್ ಆರ್‍ಎಸ್ ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ, ಸಮಾಜ ಕಲ್ಯಾಣ, ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸಂಘ, ಪೊಲೀಸ್ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನಾ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೋಟೆಲ್, ಅಂಗಡಿ, ಕೈಗಾರಿಕಾ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಮಕ್ಕಳು ಮೊಬೈಲ್, ಟಿ.ವಿ. ಗಳಿಗೆ ಅಂಟಿಕೊಳ್ಳದೇ, ಓದಿನ ಕಡೆ ಗಮನಹರಿಸಬೇಕು. ದೊಡ್ಡ ಗುರಿಯನ್ನಿಟ್ಟುಕೊಂಡು ಸಾಧನೆಯತ್ತ ಮಕ್ಕಳು ಸಾಗಬೇಕು. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅವಕಾಶ ನೀಡಿ, ಪ್ರೋತ್ಸಾಹಿಸಬೇಕು ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್‍ಎಚ್ ನಾಗೂರ ಮಾತನಾಡಿ, ಬದುಕಿನಲ್ಲಿ ವಿದ್ಯಾರ್ಥಿ ಜೀವನ ಶ್ರೇಷ್ಠವಾದದ್ದು, ಅದನ್ನು ಹಾಳು ಮಾಡಿಕೊಳ್ಳಬಾರದು. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ಕಾರ್ಯಗಳಾಗಬೇಕು.
ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಅಕ್ಬರ್ ಅಲಿ ಖಾಜಿ, ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ನಾಡಗೇರ, ಹಿರಿಯ ಕಾರ್ಮಿಕ ನಿರೀಕ್ಷಕ ವೇಮಣ್ಣ ವಿ, ರೇಖಾ ಉಪಸ್ಥಿತರಿದ್ದರು.

loading...