ಬೀದಿವ್ಯಾಪಾರಿಗಳಿಂದ ಅಕ್ರಮ ಹಣ ಸಂಗ್ರಹ ನಿಲ್ಲಿಸುವಂತೆ ಒತ್ತಾಯ

0
18
loading...

ಕನ್ನಡಮ್ಮ ಸುದ್ದಿಚಿಕ್ಕೋಡಿ 25: ಇಲ್ಲಿನ ಪುರಸಭೆ ವ್ಯಾಪ್ತಿಯ ರಸ್ತೆ ಬದಿಯಲ್ಲಿ ವ್ಯಾಪಾರ ವಹಿವಾಟು ಮಾಡುವ ಸಣ್ಣ ವ್ಯಾಪಾರಿಗಳ ಹತ್ತಿರ ಪುರಸಭೆ ಸದಸ್ಯರೊಬ್ಬರು ಹಣ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ ಪಟ್ಟಣದ ನೂರಾರು ಜನ ಮುಖ್ಯಾಧಿಕಾರಿ ಜಗದೀಶ ಹುಲಗಜ್ಜಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.ಶ್ರೀರಾಮ ಸೇನೆ ಮುಖಂಡ ವಿಕ್ರಮ ಬಣಗೆ ಮತ್ತು ಸಾಮಾಜಿಕ ಹೋರಾಟಗಾರ ಚಂದ್ರಕಾಂತ ಹುಕ್ಕೇರಿ ನೇತೃತ್ವದಲ್ಲಿ ನೂರಾರು ಪುರುಷ ಮತ್ತು ಮಹಿಳೆಯರು ಪುರಸಭೆಗೆ ಆಗಮಿಸಿ ವ್ಯಾಪಾರಿಗಳಿಂದ ಹಣ ವಸೂಲಿ ಮಾಡುವ ಪುರಸಭೆ ಸದಸ್ಯ ನರೇಂದ್ರ ನೇರ್ಲೆಕರ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ವಿಕ್ರಮ ಬಣಗೆ ಮಾತನಾಡಿ. ಪಟ್ಟಣದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಸಣ್ಣ ಸಣ್ಣ ವ್ಯಾಪಾರಿಗಳ ಕಡೆಯಿಂದ ಸದಸ್ಯರು ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ಕ್ರಮ ಖಂಡನೀಯ. ಈಗಾಗಲೇ ವಸೂಲಿ ಮಾಡಿರುವ ಹಣವನ್ನು ಮರಳಿ ಬಡ ವ್ಯಾಪಾರಿಗಳಿಗೆ ಕೊಡಬೇಕು ಮತ್ತು ಪುರಸಭೆ ಅಧಿಕಾರಿಗಳು ತೆರಿಗೆ ರೂಪದಲ್ಲಿ ನಿಗದಿ ಪಡಿಸಿದ ಹಣ ವಸೂಲಿ ಮಾಡಬೇಕು. ಅದನ್ನು ಬಿಟ್ಟು ಬೇಕಾಬಿಟ್ಟೆ ಮನಸ್ಸಿಗೆ ಬಂದಷ್ಟು ಹಣ ವಸೂಲಿ ಮಾಡಬಾರದು ಎಂದರು.ಮುಖ್ಯಾಧಿಕಾರಿ ಜಗದೀಶ ಹುಲಹಜ್ಜಿ ಮಾತನಾಡಿ. ಪಟ್ಟಣದ ವ್ಯಾಪಾರಿಗಳ ಕಡೆಯಿಂದ ತೆರಿಗೆ ಹಣ ವಸೂಲಿ ಮಾಡಿ ಪುರಸಭೆಗೆ ಕಟ್ಟಬೇಕೆಂದು ಟೆಂಡರ ಕರೆದು ಒಬ್ಬರಿಗೆ ಒಪ್ಪಿಸಲಾಗಿದೆ. ಅವರನ್ನು ಬಿಟ್ಟು ಪುರಸಭೆ ಸದಸ್ಯರು ಹಣ ವಸೂಲಿ ಮಾಡುವುದರ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ, ಈಗ ಸಾರ್ವಜನಿಕರು ಸಲ್ಲಿಸಿರುವ ಮನವಿ ಅರ್ಜಿಯನ್ನು ಆಡಳಿತ ಮಂಡಳಿ ಇಟ್ಟು ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದರು.

loading...