ಬೆಳವಡಿ ಮಲ್ಲಮ್ಮಳ ಉತ್ಸವಕ್ಕೆ ಅದ್ದೂರಿ ಚಾಲನೆ

0
29
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ (ರಾಣಿ ಮಲ್ಲಮ್ಮ ವೇದಿಕೆ): ವೀರವನಿತೆ ಬೆಳವಡಿ ಮಲ್ಲಮ್ಮಳ 2018ನೇ ಸಾಲಿನ ಉತ್ಸವದ ಜಾನಪದ ಕಲಾಮೇಳಕ್ಕೆ ಬುಧವಾರ ಅದ್ಧೂರಿ ಚಾಲನೆ ನೀಡಲಾಯಿತು.
ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ನಡೆದ ಉತ್ಸವದ ಜಾನಪದ ಕಲಾವಾಹಿನಿ ಮೆರವಣಿಗೆ ಮಲ್ಲಮ್ಮ ರಾಣಿ ಇತಿಹಾಸ ಮರುಕಳಿಸುವಂತೆ ಮಾಡಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾನಪದ ಕಲಾ ವಾಹಿನಿ ಮೆರವಣಿಗೆ ನೋಡುಗರ ಕಣ್ಮನ ಸೆಳೆಯಿತು. ಗ್ರಾಮಸ್ಥರು ಹಣೆಗೆ ತಿಲಕ, ತಲೆಗೆ ಪೇಠ ತೊಟ್ಟು ಕಂಗೊಳಿಸಿದ ಊರಿನ ಹಿರಿಯರು, ಯುವಕರು, ಮುದ್ದು ವಿದ್ಯಾರ್ಥಿಗಳು, ಸ್ತ್ರೀಶಕ್ತಿ ಸಂಘದ ಮಹಿಳೆಯರು ತರತರನಾದ ಉಡುಪುಗಳನ್ನು ತೊಟ್ಟಿದ್ದ ನೂರಾರು ಕಲಾವಿದರುಗಳೊಂದಿಗೆ ಹೆಜ್ಜೆ ಹಾಕಿದರು.
ಶಾಸಕ ಡಾ.ವಿಶ್ವನಾಥ ಪಾಟೀಲ, ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ, ಸಿಇಒ ರಾಮಚಂದ್ರನ್‌ ಆರ್‌. ಬೆಳವಡಿ ಮಲ್ಲಮ್ಮ ವೃತ್ತದಲ್ಲಿ ಬೆಳವಡಿ ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ಶಾಸಕ ಡಾ.ವಿಶ್ವನಾಥ ಪಾಟೀಲ ಶೌರ್ಯ ಮಾತನಾಡಿ, ದೇಶದಲ್ಲಿಯೇ ಪ್ರಪ್ರಥಮ ಮಹಿಳಾ ಸೈನ್ಯ ಕಟ್ಟಿದ ವೀರ ವನಿತೆ ಬೆಳವಡಿ ಮಲ್ಲಮ್ಮಳ ಸಾಹಸಮಯ ಇತಿಹಾಸದ ಜೀವನ ಇಂದಿನ ಮಹಿಳೆಯರಿಗೆ ಆತ್ಮಸ್ಥೈರ್ಯ ಹೊಂದಲು ಸಹಕಾರಿಯಾಗಿದೆ. ಮಲ್ಲಮ್ಮಳ ಉತ್ಸವವನ್ನು ಸರಕಾರಿ ಉತ್ಸವವಾಗದೇ, ಜನೋತ್ಸವವಾಗಿ ಹೊರಹೊಮ್ಮಲು ನಾಡಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವಕ್ಕೆ ಮೆರಗು ತರಬೇಕು.
ಉಪವಿಭಾಗಾಧಿಕಾರಿ ಡಾ.ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ, ತಹಶೀಲ್ದಾರ ಪ್ರಕಾಶ ಗಾಯಕವಾಡ, ಕ್ಷೇತ್ರಶಿP್ಪ್ಷಣಾಧಿಕಾರಿ ಪಾರ್ವತಿ ವಸ್ತ್ರದ, ಜಿಪಂ ಸದಸ್ಯ ಈರಣ್ಣಾ ಕರೀಕಟ್ಟಿ, ತಾಪಂ ಅಧ್ಯಕ್ಷೆ ಶೈಲಾ ಸಿದ್ರಾಮನಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಅಮೃತಾ ಕಕ್ಕಯ್ಯನವರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಈರವ್ವಾ ತಳವಾರ, ಉಪಾಧ್ಯಕ್ಷೆ ಕಸ್ತೂರೆವ್ವಾ ರೇಶ್ಮಿ, ಸದಸ್ಯರಾದ ಮಡ್ಡೆಪ್ಪ ಹುಂಬಿ, ಬಾಳಪ್ಪ ಚವರದ, ಲಕ್ಷ್ಮಣ ಸಾಲಹಳ್ಳಿ, ಗಂಗಪ್ಪ ತುರಾಯಿ, ರಫೀಕ ಹುಜರತಿ, ಸಿದ್ದಪ್ಪ ಸಿದ್ದನ್ನವರ, ಶಂಕರ ಬಳಿಗರ, ಡಾ.ಡಿ.ವೈ.ಗರಗದ, ತಾಲ್ಲೂಕು ಪಂಚಾಯ್ತಿ ಅಧಿಕಾರಿ ಎಸ್‌.ಎಸ್‌.ಕಾದ್ರೊಳ್ಳಿ, ಪಿಡಿಒ ಮೇಘನಾ ಶೆಟ್ಟಿ, ದಲಿತ ಮುಖಂಡ ಪ್ರಭಾಕರ ಭಜಂತ್ರಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ವಿ.ಆರ್‌.ಮುನವಳ್ಳಿ, ಸಿಡಿಪಿಒ ಎಸ್‌.ಎಸ್‌.ಮರೀಕಟ್ಟಿ, ವೈದ್ಯಾಧಿಕಾರಿ ಡಾ.ಎಸ್‌.ಎಸ್‌.ಸಿದ್ದನ್ನವರ, ಕಿತ್ತೂರು ಸಿಪಿಐ ರಾಘವೇಂದ್ರ ಹವಾಲ್ದಾರ, ಪಿಎಸ್‌ಐ ಸುಮಾ ನಾಯ್ಕ, ಊರಿನ ಹಿರಿಯರು, ಯುವಕ ಸಂಘಟನೆಗಳ ಪದಾಧಿಕಾರಿಗಳು, ಕರವೇ ಕಾರ್ಯಕರ್ತರು, ಮಹಿಳಾ ಸ್ತ್ರೀಶಕ್ತಿ ಸಂಘಟನೆ ಸದಸ್ಯರುಗಳು, ಶಾಲೆ, ಕಾಲೇಜು ವಿದ್ಯಾರ್ಥಿಗಳು ಇದ್ದರು.
ಕಲಾ ತಂಡಗಳ ರಸದೌತಣ: ಜಾನಪದ ಕಲಾವಾಹಿನಿಗೆ ಚಾಲನೆ ನೀಡುತ್ತಿದ್ದಂತೆ ರಂಗು, ರಂಗೀನ ಉಡುಪು ತೊಟ್ಟು ಬೆಳವಡಿ ಗ್ರಾಮದ ತುಂಬ ಹೆಜ್ಜೆ ಹಾಕಿದ ಕಲಾವಿದರುಗಳು ಸಾರ್ವಜನಿಕರಿಂದ ಅಭಿಮಾನದ ಚಪ್ಪಾಳೆ ಗಿಟ್ಟಿಸಿಕೊಂಡರು. ಗ್ರಾಮದ ತುಂಬೆಲ್ಲ ಲವಲವಿಕೆಯಿಂದ ಓಡಾಡಿ ತಮ್ಮ ಕಲಾ ನೈಪುಣ್ಯತೆ ತೋರಿಸಿದರು. ಪ್ರತಿಯೊಂದು ಕಲಾ ತಂಡ ನೋಡುಗರಿಗೆ ಕಲಾ ರಸದೌತಣ ಉಣಬಡಿಸಿತು. 20ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಗುಂಡೆನಟ್ಟಿಯ ಜಗ್ಗಲಗಿ ಮೇಳ, ಹಂದಿಗುಂದ ಜಾಂಜ್‌ ಪಥಕ, ರಾಮದುರ್ಗದ ಡೊಳ್ಳು ಕುಣಿತ, ಶಹಾಪುರ ಕರಬಲ್ಲ ಕುಣಿತ, ಚಮಕೇರಿ ಕರಡಿ ಮಜಲು, ಕಲ್ಲೊಳ್ಳಿ ವೀರಭದ್ರ ಕುಣಿತ, ಸಂಭಾಳವಾದನ, ಅಳಗವಾಡಿ ಕುದರೆ ಕುಣಿತ, ಚಿಂಚಲಿ ಡೋಲು ಪಥಕ, ಹಳಿಯಾಳ ತಾಸೇವಾದನ, ಮೊರಬ ಕರಬಲ್ಲ ಕುಣಿತ, ಹಗಲೂ ವೇಷ ಕಲಾ ತಂಡದ ರಾಮ, ರಾಕ್ಷಸ ಪಾತ್ರಧಾರಿ ನೋಡುಗರ ಕಣ್ಣಿಗೆ ಮುದ ನೀಡಿದರು.
ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರು, ಪಿಡಿಒ, ಸದಸ್ಯರು ವಿವಿ ಮತಯಂತ್ರ ಕುರಿತು ಕರ ಪತ್ರ ವಿತರಿಸಿದರು. ಗೈರು ಹಾಜರಿ : ಧ್ವಜಾರೋಹಣ ನೆರವೇರಿಸಬೇಕಿದ್ದ ಜಿಲ್ಲಾ ಉಸ್ತುವಾರಿ ರಮೇಶ ಜಾರಕಿಹೊಳಿ, ಜ್ಯೋತಿ ಬರಮಾಡಿಕೊಳ್ಳಬೇಕಿದ್ದ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ, ಕಲಾಮೇಳ ಉದ್ಘಾಟಿಸಬೇಕಿದ್ದ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ನೇತೃತ್ವಹಿಸಬೇಕಿದ್ದ ಶಾಸಕ ಡಿ.ಬಿ.ಇನಾಮದಾರ, ವಸ್ತು ಪ್ರದರ್ಶನ ಉದ್ಘಾಟಿಸಬೇಕಿದ್ದ ಸಂಸದ ಸುರೇಶ ಅಂಗಡಿ ಗೈರು ಎದ್ದು ಕಂಡಿತು.

loading...