ಬೆಳವಡಿ ಮಲ್ಲಮ್ಮ ಜಾತಿಗೆ ಸಿಮಿತವಾಗಬಾರದು: ಡಾ.ಲಲಿತಾ ನಾಯಕ

0
26
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ವೀರ ವನಿತೆ ಬೆಳವಡಿ ಮಲ್ಲಮ್ಮನನ್ನು ಜಾತಿಗೆ ಸೀಮಿತಗೊಳಿಸಬಾರದು. ಆಕೆಯ ಸ್ತ್ರೀ ಸ್ವಾತಂತ್ರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಮಲ್ಲಮ್ಮ ತಾಯಿಗೆ ಗೌರವ, ಸ್ಥಾನಮಾನ ನೀಡಬೇಕು ಎಂದು ಬೆಂಗಳೂರು ಸಂಸ್ಕೃತಿ ಚಿಂತಕಿ, ಹಿರಿಯ ಲೇಖಕಿ ಡಾ.ಬಿ.ಟಿ.ಲಲಿತಾ ನಾಯಕ ಹೇಳಿದರು.
ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಲ್ಲಮ್ಮನ ಉತ್ಸವ ಅಂಗವಾಗಿ ಗುರುವಾರ ನಡೆದ ವಿಚಾರ ಸಂಕಿರಣ, ಯುವ ಜನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ಪೀಳಿಗೆಗೆ ಮಲ್ಲಮ್ಮನ ಆದರ್ಶಗಳನ್ನು ಉಳಿಸಿ ಬೆಳೆಸಲು ಅಗತ್ಯ ಕಾರ್ಯಕ್ರಮ ರೂಪಿಸಬೇಕು. ಮಲ್ಲಮ್ಮನ ಶೌರ್ಯಗಾತೆಯ ಬಗ್ಗೆ ಸರ್ಕಾರ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಉತ್ಸವ ಕುರಿತು ಸ್ಥಳೀಯರ ಆಸಕ್ತಿ ಅತ್ಯವಶ್ಯ, ಮಲ್ಲಮ್ಮನ ಬಗ್ಗೆ ಯಾವುದೇ ಕುರುಹಗಳು ಬೆಳವಡಿಯಲ್ಲಿ ಇಲ್ಲದಿರುವುದರಿಂದ ಸಂಶೋಧನೆ ಮಾಡಬೇಕಿದೆ ಎಂದರು. ಮಲ್ಲಮ್ಮನ ಹಾಗೆ ಇಂದಿನ ಮಹಿಳೆಯರು ಸಿಡಿದೆಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ನಾಡು, ನುಡಿ ಕುರಿತು ಅಭಿಮಾನ ರೂಡಿಸಿಕೊಳ್ಳಬೇಕು. ಮಲ್ಲಮ್ಮನ ದಿವ್ಯ ಚೇತನವನ್ನು ಅಜರಾಮರವಾಗಿ ಉಳಿಯುವಂತೆ ಮಾಡಲು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಡಾ.ಮೈತ್ರೆಯಿಣಿ ಗದಿಗೆಪ್ಪಗೌಡರ ಮಾತನಾಡಿ, ಆಧುನಿಕ ಸಂದರ್ಭದಲ್ಲಿ ಮಹಿಳಾ ಸಬಲೀಕರಣವಾಗಿಲ್ಲ. ಶೇ.60ರಷ್ಟು ಮಾತ್ರ ಮಹಿಳೆ ಸಬಲೀಕರಗೊಂಡಿದ್ದಾಳೆ. ಕಾಟಾಚಾರಕ್ಕೆ ಉತ್ಸವಗಳು ನಡೆಯುವಂತಾಗಬಾರದು. ಮಹಿಳಾ ಗೋಷ್ಠಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರುವಂತಾಗಬೇಕು. ಇವತ್ತಿಗೂ ಬೆಳಗಾವಿ ಜಿಲ್ಲೆಯಲ್ಲಿ ದೇವದಾಸಿ ಪದ್ದತಿ, ಬಾಲ್ಯವಿವಾಹ ಜೀವಂತ ಇರುವುದು ವಿಷಾದನೀಯ. ಆಧುನಿಕ ಮಹಿಳೆಯರ ಕುರಿತು ಚಿಂತನೆ ಮಾಡಬೇಕಿದೆ ಎಂದರು.
ಬೆಳಗಾವಿ ಲಿಂಗರಾಜ ಕಾಲೇಜಿನ ಪ್ರಾಧ್ಯಾಪಕಿ ಡಾ.ಗುರುದೇವಿ ಹುಲ್ಲೇಪ್ಪನವರಮಠ ಮಹಿಳಾ ಸಬಲೀಕರಣ ಕುರಿತು ಮಾತನಾಡಿ, ಮಹಿಳೆಯರಿಗೆ ಸಮಾಜದಲ್ಲಿ ಎತ್ತರದ ಸ್ಥಾನ ನೀಡುವಲ್ಲಿ ಪುರುಷರು ಹಿಂದೇಟು ಹಾಕುತ್ತಾರೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಎತ್ತರಿಸುವ ನಿಟ್ಟಿನಲ್ಲಿ ಸಮಾಜ ಆಲೋಚಿಸುತ್ತಿಲ್ಲ. ಸರ್ಕಾರ ಮಹಿಳೆಯರ ಆಶೋತ್ತರಗಳಿಗೆ ಅನುಗುಣವಾಗಿ ಅಭಿವೃದ್ದಿ ಪರ ರೂಪಿಸುವ ಅಗತ್ಯತೆ ಇದೆ ಎಂದರು. ರಾಯಭಾಗ ಪ್ರಾಧ್ಯಾಪಕ ಡಾ:ವ್ಹಿ.ಎಸ್‌.ಮಾಳಿ ಮಾತನಾಡಿದರು. ಪ್ರಾಧ್ಯಾಪಕಿ ಡಾ. ಸರಸ್ವತಿದೇವಿ ಭಗವತಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ವಿಷಯ ಮಂಡಣೆಯ ಕುರಿತು ಸಂವಾದ, ಭಾಷಣ ಸ್ಪರ್ಧೆ ನಡೆಯಿತು. ಸಾಹಿತಿ ಪಾಟೀಲ, ಸಂಶೋಧಕ ಡಾ. ಸಂತೋಷ ಹಾನಗಲ್ಲ ಕಾರ್ಯಕ್ರಮ ಸಂಯೋಜಿಸಿದ್ದರು. ಪ್ರ್ರವೀಣ ಗಿರಿ ಸ್ವಾಗತಿಸಿದರು. ಶಿಕ್ಷಕ ಎಂ.ಪಿ.ಉಪ್ಪಿನ ನಿರೂಪಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಐಶರ್ಯಾ ಶಿಂತ್ರಿ ಪ್ರಥಮ, ಲಕ್ಷ್ಮೀ ಅಂಗಡಿ ದ್ವಿತೀಯ, ಸವಿತಾ ಗುಗ್ಗರಿ ತೃತೀಯ ಸ್ಥಾನ ಪಡೆದುಕೊಂಡರು.

loading...