ಬೈಪಾಸ್‌ ರಸ್ತೆ ನಿರ್ಮಿಸಿ ವಾಹನ ದಟ್ಟಣೆ ನಿವಾರಿಸುವಂತೆ ಆಗ್ರಹ

0
18
loading...

ಕನ್ನಡಮ್ಮ ಸುದ್ದಿ-ಶಿರಸಿ: ವಾಣಿಜ್ಯ ನಗರಿ ಶಿರಸಿ ಬೆಳೆಯುತ್ತಿರುವ ನಗರವಾಗಿದೆ. ಸಾಕಷ್ಟು ವಾಹನ ದಟ್ಟಣೆ ಸಮಸ್ಯೆ ಎದುರಾಗುತ್ತಿರು ಹಿನ್ನೆಲೆಯಲ್ಲಿ ಬೈಪಾಸ್‌ ರಸ್ತೆ ನಿರ್ಮಿಸಿ ವಾಹನ ದಟ್ಟಣೆ ನಿವಾರಿಸುವಂತೆ ಆಗ್ರಹಿಸಿ ಇಲ್ಲಿನ ತಾಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಠರಾವು ಕೈಗೊಳ್ಳಲಾಯಿತು.
ಮಂಗಳವಾರ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಚಂದ್ರು ದೇವಾಡಿಗ ವಿಷಯ ಪ್ರಸ್ತಾಪಿಸಿ, ನಗರದಲ್ಲಿ ಈಗಾಗಲೇ ಸಾಕಷ್ಟು ವಾಹನ ದಟ್ಟಣೆಯಿದೆ. ಇನ್ನು ಖಾನಾಪುರ-ತಾಳಗುಪ್ಪ ರಾಜ್ಯ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದೆ. ರಾಷ್ಟ್ರೀಯ ಹೆದ್ದಾರಿಯ ಡಿಟೇಲ್‌ ಪ್ರೊಜೆಕ್ಟ್‌ ರಿಪೋರ್ಟ್‌ ಕಾರ್ಯ ಪ್ರಾರಂಭವಾಗಿದೆ. ಈ ಮಾರ್ಗ ನಗರದೊಳಗೆ ಹಾದು ಹೋದರೆ ವಾಹನ ದಟ್ಟಣೆ ಮಿತಿ ಮೀರುತ್ತದೆ ಎಂದರು. ಹೀಗಾಗಿ ಸಿದ್ದಾಪುರ-ಯಲ್ಲಾಪುರ-ತಾಳಗುಪ್ಪ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿ ಶಿರಸಿ ನಗರದ ಹೊರಭಾಗದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಡಿಪಿಆರ್‌ ಸರ್ವೆ ನಡೆಸುವಂತೆ ಸರ್ಕಾರಕ್ಕೆ ಆಗ್ರಹಿಸಲು ಠರಾವು ಮಾಡಲಾಯಿತು.
ಆಹಾರ ಇಲಾಖೆ ನಿರೀಕ್ಷಕ ಮಂಜುನಾಥ ಮಾತನಾಡಿ, ಹೊಸ ಪಡಿತರ ಚೀಟಿಗಳನ್ನು ಕೊಡಲಾಗುತ್ತಿದೆ. 48 ಪಡಿತರ ವಿತರಣಾ ಕೇಂದ್ರವಿದ್ದು, ಬಾಕಿಯುಳಿದ 9 ಕೇಂದ್ರಕ್ಕೂ ಬಯೋಮೆಟ್ರಿಕ್‌ ವ್ಯವಸ್ಥೆ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. 2016-17ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಯ 9 ಕಾಮಗಾರಿಯಲ್ಲಿ 4 ಕಾಮಗಾರಿ ಪ್ರಗತಿಯಲ್ಲಿದೆ. 2017-18ರಲ್ಲಿ 2 ಕಾಮಗಾರಿಗಳ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಇಲಾಖಾ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಲೋಕೋಪಯೋಗಿ ಇಲಾಖೆಯ ವಿ.ಎಂ.ಭಟ್ಟ ಮಾಹಿತಿ ನೀಡುತ್ತಾ, ತಾಲೂಕಿನ ಹಲವು ಶಾಲಾ ಕೊಠಡಿಗಳ ದುರಸ್ತಿಗೆ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಟೆಂಡರ್‌ ಕರೆಯಲಾಗಿದೆ. 8.7 ಲಕ್ಷ ರೂ ಪ್ರತೀ ಕೊಠಡಿಗೆ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ನಡೆಸಲಾಗುವುದು ಎಂದರು.
ಪಂಚಾಯ್ತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇದ್ದರೆ ತಾಲೂಕು ಪಂಚಾಯ್ತಿಗೆ ಆಯಾ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಗಮನಕ್ಕೆ ತರಬೇಕು. ಇದನ್ನು ಮೇಲಧಿಕಾರಿಗಳಿಗೆ ತಿಳಿಸಿ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ವಿ.ಖೂರ್ಸೆ ಹೇಳಿದರು

loading...