ಬೈಪಾಸ್ ರಸ್ತೆ ನಿಮಾಣಕ್ಕೆ ಆಗ್ರಹ

0
11
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನದಟ್ಟಣೆ ದಿನದಿಂದ ಹೆಚ್ಚಾಗುತ್ತಿದ್ದು, ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯವಾಗಿರುವ ಬೈಪಾಸ್ ರಸ್ತೆ ನಿಮಾಣಕ್ಕೆ ಸರ್ಕಾರ ಮುಂದಾಗಬೇಕು ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಆಗ್ರಹಿಸಿದರು.
ಶನಿವಾರ ಪತ್ರಿಕಾ ಗೋಷ್ಟಿಯಲ್ಲಿ ಅವರು ಮಾತನಾಡಿ ತುರ್ತಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರ ವ್ಯಾಪ್ತಿಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಆರಂಭಿಸಬೇಕು.

ಕಳೆದ 1 ವರ್ಷದಿಂದ 7 ಕ್ಕೂ ಹೆಚ್ಚು ಎಲ್.ಪಿ.ಜಿ ಗ್ಯಾಸ್ ಹೊತ್ತ ಟ್ಯಾಂಕರ್ ಬಿದ್ದ ಪರಿಣಾಮ ಅನೇಕ ಸಾರಿ ಆತಂಕ ಸೃಷ್ಟಿಸಿದ್ದವು. ಇದೇ ತಿಂಗಳಿನಲ್ಲಿ ಪಟ್ಟಣದಲ್ಲಿ 3 ಅಂಗಡಿಗಳಿಗೆ ಭಾರಿ ವಾಹನ ನುಗ್ಗಿ ಹಾನಿ ಮಾಡಿದೆ. ಹೀಗೆ ಯಲ್ಲಾಪುರ ಸದಾ ಅಪಘಾತದ ಕೇಂದ್ರವಾಗುತ್ತದೆ. ಜನ ಓಡಾಡುವುದಕ್ಕೆ ಆತಂಕ ಪಡುತ್ತಿದ್ದಾರೆ ಎಂದರು.
ಸಾಮಾಜಿಕ ಕಾರ್ಯಕರ್ತ ಡಿ.ಎನ್.ಗಾಂವ್ಕರ್ ಮಾತನಾಡಿ, ಯಲ್ಲಾಪುರದ ಜ್ವಲಂತ ಸಮಸ್ಯೆಗಳನ್ನೂ ಸೇರಿದಂತೆ ಎಲ್ಲ ವಿಚಾರಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾಗೃತಗೊಳ್ಳಲು ಜನ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಉಂಟಾಗಿದೆ. ವಿಶೇಷವಾಗಿ ಪಟ್ಟಣದ ಮೇಲೆ 3 ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿರುವುದರಿಂದ ಪಟ್ಟಣದ ಸಂಪೂರ್ಣ ವ್ಯವಸ್ಥೆಗೆ ಧಕ್ಕೆ ಬರಲಿದೆ. ಈ ಎಲ್ಲ ಕಾರಣದಿಂದ ಬೈಪಾಸ್ ತುರ್ತು ಅಗತ್ಯ ಎಂದರು. ವಕೀಲ ಎನ್.ಟಿ.ಗಾಂವ್ಕರ್ , ಶ್ಯಾಮಿಲಿ ಪಾಟಣಕರ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

loading...