ಬ್ಲಾಕ್‍ಹೋಲ್ ಜನಕ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಇನ್ನಿಲ್ಲ

0
30
loading...

ಲಂಡನ್ -ಜಗತ್ಪ್ರಸಿದ್ಧ ಬ್ರಿಟಿಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್(76) ಇನ್ನಿಲ್ಲ. ಸೌರಮಂಡಲದ ಕಪ್ಪು ಕುಳಿ(ಬ್ಲಾಕ್ ಹೋಲ್) ಹಾಗೂ ಸಾಪೇಕ್ಷತಾ ಸಿದ್ಧಾಂತದಲ್ಲಿ ಅದ್ಭುತ ಸಂಶೋಧನೆಗಳನ್ನು ಮಾಡಿ ಆಧುನಿಕ ವಿಶ್ವ ವಿಜ್ಞಾನದ ಉಜ್ವಲ ತಾರೆ ಎಂದೇ ಚಿರಪರಿಚಿತರಾಗಿದ್ದ ಅವರು ಕೇಂಬ್ರಿಡ್ಜ್‍ನ ತಮ್ಮ ನಿವಾಸದಲ್ಲಿ ಇದು ಕೊನೆಯುಸಿರೆಳೆದರು. ಅಂಗವೈಕಲ್ಯವನ್ನು ಮೆಟ್ಟಿ ನಿಂತು ಅಸಾಮಾನ್ಯ ಜ್ಞಾನದೊಂದಿಗೆ ವಿಶ್ವದ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರೆಂದು ಮಾನ್ಯತೆ ಪಡೆದಿದ್ದ ಇವರ ನಿಧನಕ್ಕೆ ಜಗತ್ತು ಸಂತಾಪ ಸೂಚಿಸಿದೆ.

ನಮ್ಮ ಪ್ರೀತಿಯ ತಂದೆಯವರು ಇಂದು ನಿಧನರಾದರು ಎಂದು ತಿಳಿಸಲು ನಮಗೆ ಅತೀವ ದುಃಖವಾಗುತ್ತದೆ ಎಂದು ಹಾಕಿಂಗ್ ಅವರ ಮಕ್ಕಳಾದ ಲೂಸಿ, ರಾಬರ್ಟ್ ಮತ್ತು ಟಿಮ್ ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಅವರು ಅದ್ಭುತ ವಿಜ್ಞಾನಿ ಹಾಗೂ ಅಸಾಧಾರಣ ವ್ಯಕ್ತಿಯಾಗಿದ್ದರು. ತಮ್ಮ ಅಪಾರ ಜ್ಞಾನ, ಬುದ್ಧಿವಂತಿಕೆ ಹಾಗೂ ಹಾಸ್ಯಪ್ರಜ್ಞೆಯಿಂದ ವಿಶ್ವದ ಅನೇಕರಿಗೆ ಅವರು ಸ್ಪೂರ್ತಿಯ ಚಿಲುಮೆಯಾಗಿದ್ದರು ಎಂದು ಬಣ್ಣಿಸಿದ್ಧಾರೆ.

ಇವರು 1988ರಲ್ಲಿ ಬರೆದ ಎ ಬ್ರೀಪ್ ಹಿಸ್ಟರಿ ಆಫ್ ಟೈಮ್ ಎಂಬ ಪುಸ್ತಕವು 10 ದಶಲಕ್ಷ ಪ್ರತಿಗಳು ಮಾರಾಟವಾಗಿ ವಿಶ್ವವಿಖ್ಯಾತಿ ಗಳಿಸಿ ಪ್ರಪಂಚದ 40ಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಯಾಗಿ ಗಿನ್ನಿಸ್ ದಾಖಲೆ ನಿರ್ಮಿಸಿದೆ. ಹಾಕಿಂಗ್ ಅವರು  ಅಲ್ಬರ್ಟ್ ಐನ್‍ಸ್ಟೀನ್ ಪ್ರಶಸ್ತಿ, ವುಲ್ಫ್ ಪ್ರಶಸ್ತಿ, ಕೊಪ್ಲೆ ಮೆಡಲ್, ಫಂಡಮೆಂಟಲ್ ಫಿಸಿಕ್ಸ್ ಪ್ರಶಸ್ತಿ ಇತ್ಯಾದಿ ಪುರಸ್ಕಾರ-ಸನ್ಮಾನಗಳನ್ನು ಗಳಿಸಿದ್ದಾರೆ. ಸ್ಪೀಫನ್ ಹಾಕಿಂಗ್ ನಿಧನಕ್ಕೆ ಇಡೀ ವಿಶ್ವವೇ ಸಂತಾಪ ಸೂಚಿಸಿದ್ದು, ಬ್ರಿಟನ್ ಪ್ರಧಾನಿ ಥರೇಸಾ ಮೇ. ಬ್ರಿಟಿಷ್ ರಾಜಮನೆತನ, ಅನೇಕ ದೇಶಗಳ ಮುಖಂಡರು, ಖ್ಯಾತ ವಿಜ್ಞಾನಿಗಳು ಸೇರಿದಂತೆ ಖ್ಯಾತನಾಮರು ಇವರ ಸಾಧನೆಯ ಗುಣಗಾನ ಮಾಡಿದ್ದಾರೆ.  ವಿಜ್ಞಾನ ಕ್ಷೇತ್ರಕ್ಕೆ ಹಾಕಿಂಗ್ ಇಷ್ಟೊಂದು ಕೊಡುಗೆ ನೀಡಿದರೂ ಅವರಿಗೆ ನೊಬೆಲ್ ಪ್ರಶಸ್ತಿ ಸಿಗದಿರುವುದು ವಿಪರ್ಯಾಸ.

loading...