ಮತ ಬೇಟೆಗೆ ಲಿಂಗಾಯತ ಪ್ರತ್ಯೇಕ ಧರ್ಮ

0
10
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ವೀರಶೈವದ ಪರ್ಯಾಯ ಪದವೆನಿಸಿದ ಲಿಂಗಾಯತವು ಸ್ವತಂತ್ರ ಧರ್ಮವೆಂದು ವಾದಿಸುವ ಮಾತೃ ಧರ್ಮಕ್ಕೆ ಎರಡು ಬಗೆಯುತ್ತಿರುವ ಕೆಲವರನ್ನು ಓಲೈಸಲು ಇಂದಿನ ಸರಕಾರ, ಅದರ ಮುಖ್ಯಸ್ಥರು ತಜ್ಞರ ಸಮಿತಿಯನ್ನು ತರಾತುರಿಯಲ್ಲಿ ನೇಮಿಸಿದರು. ಲಿಂಗಾಯತವು ವೀರಶೈವದ ಪರ್ಯಾಯ ಜಾತಿ ಸಮುದಾಯ, ವೀರಶೈವವು ಪ್ರಾಚೀನ ಪರಂಪರೆಯ ಅನಾದಿ ಸಂಸಿದ್ಧ ಧರ್ಮವೆಂದು 1904ರಲ್ಲಿಯೇ ನಿರ್ಣಯಿಸಿರುವರು. ಅಂದೇ ವೀರಶೈವದ ಪರ್ಯಾಯವಾಚಿಯಾದುದು ಲಿಂಗಾಯತವೆಂದು ನಿರ್ಧರಿಸಿದೆ.
ವಸ್ತು ಸ್ಥತಿ ಹೀಗಿದ್ದರೂ ರಾಜಕೀಯ ಲಾಭಕ್ಕಾಗಿ ಓಟಿನ ಬೇಟೆಗಾಗಿ ಲಿಂಗಾಯತರೆನ್ನುವವರಿಗೆ ಹಲವು ಸೌಲತ್ತಿನ ಆಸೆ ತೋರಿಸಿದ ಕಾರಣ ಕೆಲವರು ಸರಕಾರಕ್ಕೆ ಅರ್ಜಿ ಸಲ್ಲಿಸಿ ಅದರ ವಿಚಾರಣೆಗೆ ನೆಪ ಮಾತ್ರಕ್ಕೆ ಸರಕಾರ ತಜ್ಞರ ಸಮಿತಿಯನ್ನು ನೇಮಿಸಿತು. ಆ ಸಮಿತಿ ಆರು ತಿಂಗಳ ಕಾಲಾವಕಾಶ ಬೇಕೆಂದು ಹೇಳಿದರೂ ಸರಕಾರದ ಒತ್ತಾಸೆಯಂತೆ ಈ ಸಮಿತಿ ಆತುರದ ನಿರ್ಧಾರ ನೀಡಿರುವುದು ಸೂಕ್ತವಲ್ಲ, ಸಮುಚಿತವೂ ಅಲ್ಲ. “ತಜ್ಞ”ರೆಂದರೆ ವಿಷಯವನ್ನು ಬಲ್ಲವರು, ತಿಳಿದವರು, ಜ್ಞಾನಿಗಳು, ನುರಿತವರು, ಬುದ್ದಿವಂತರೆಂಬ ಅರ್ಥಗಳಿವೆ. ವಿಶಾಲವಾದ ಅರ್ಥ ತಜ್ಞನಿಗೆ ಇದ್ದರೂ ಈ ಸಮಿತಿಯವರು ‘ವೀರಶೈವ-ಲಿಂಗಾಯತ’ದ ಪರಿಭಾಷೆಯನ್ನು ಅರ್ಥೈಸಿಕೊಳ್ಳದೆ ತಮಗೆ ತಿಳಿದಂತೆ ವರದಿ ನೀಡಿರುವದು “ತಜ್ಞ”ಪದಕ್ಕೇನೆ ಅವಮಾನಿಸಿದಂತಿ ದೆ. ಲಿಂಗಾಯತವು ವೀರಶೈವವಲ್ಲ, ಇದು ಹಿಂದೂ ಅಲ್ಲ. ಇದನ್ನು ಬಸವಣ್ಣನು 12ನೇ ಶತಮಾನದಲ್ಲಿ ಸ್ಥಾಪಿಸಿದನೆಂದು ಇದಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕೆಂಬ ಸಿಫಾರಿಸಿರುವುದು ಸೂಕ್ತವಲ್ಲ.
ಬಸವಣ್ಣನವರು ಲಿಂಗಾಯತ ಪದವನ್ನು ಎಲ್ಲಿಯಾದರೂ ಉಪಯೋಗಿಸಿರುವರೆ? ಅವರ ವಚನದಲ್ಲಿ ಹೇಳಿರುವರೆ? ಅವರ ಸಮಕಾಲಿನ ಶರಣರು ಹೇಳಿರುವರೆ? ಹೀಗಿದ್ದು ಅದರ ಸಂಸ್ಥಾಪಕ ಹೇಗಾಗಬಲ್ಲರು.? ಈ ಹಿಂದೆಯೇ ಶತಾಯುಷಿಗಳು, ಅನುಭಾವಿಗಳು ಆದ ಪೂಜ್ಯ ಸಿದ್ದಗಂಗೆಯ ಡಾ. ಶಿವಕುಮಾರ ಮಹಾಸ್ವಾಮಿಗಳು ಲಿಖಿತ ಹೇಳಿಕೆ ನೀಡಿ ವೀರಶೈವ-ಲಿಂಗಾಯತ ಭಿನ್ನವಲ್ಲ. ಸುಸಂಸ್ಕೃತರು ವೀರಶೈವ ಪದವನ್ನು ಹೇಳಿದರೆ ಜನಪದರು ಲಿಂಗಾಯತ ಪದ ಬಳಕೆ ಮಾಡುತ್ತಾರೆಂದಿರುವದು ಸೂರ್ಯನಷ್ಟೆ ಬೆಳಕು ನೀಡಿದೆ. ಇಂದಿನ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರೂ ಇದನ್ನು ಒಪ್ಪಿರುವರು.
ಅನೇಕ ಮಠಾಧೀಶರು ಇದೇ ಅಭಿಪ್ರಾಯವನ್ನು ವ್ಯಕ್ತ ಮಾಡಿರುವರು. ಅಲ್ಲದೆ ವೀರಶೈವ ಪ್ರಮುಖರ ಹಾಗೂ ಲಿಂಗಾಯತರ ಸಂವಾದ ಏರ್ಪಡಿಸಿದ್ದೂ ಕಾರ್ಯಗತವಾಗದೆ, ಪ್ರಸ್ತುತ ತಜ್ಞರ ಸಮಿತಿಯು ಏಕ ಪಕ್ಷೀಯವಾಗಿದೆ ಯಾವುದೇ ವಿಚಾರ ಮಾಡದೇ ಸರಕಾರದ ಆಸೆಗೆ ತಕ್ಕಂತೆ ಉತ್ತರಿಸಿರುವದು ಸೂಕ್ತವೆನಿಸಲಾರದು. ತಜ್ಞರ ಸಮಿತಿಗೆ ಇದು ಭೂಷಣವೆನಿಸದು. ಸೂಜ್ಞರಾದವರು ಇದನ್ನು ಒಪ್ಪಲಾರರು. ರಾಜಕೀಯ ಪ್ರೇರಿತವೆಂಬುವದು ಸ್ಪಷ್ಟವಿದೆ.

loading...