ಮಳೆಯಾಶ್ರಿತ ಪ್ರದೇಶಗಳಲ್ಲಿ ನೀರಿಗಾಗಿ ಜನರ ಪರದಾಟ|| ತೋಟಪಟ್ಟಿ ಜನರಿಗೆ ಬೇಕಿದೆ ಟ್ಯಾಂಕರ್‌ ನೀರು ||

0
30
loading...

ಶಿವಾನಂದ ಪದ್ಮಣ್ಣವರ

ಚಿಕ್ಕೋಡಿ 25: ಕಳೆದ ಬಾರಿಗಿಂತಲೂ ಕುಡಿಯುವ ನೀರು ಹಾಗೂ ಮೇವಿನ ಪರಿಸ್ಥಿತಿ ಅಲ್ಪಸ್ವಲ್ಪ ಚೆನ್ನಾಗಿದ್ದರೂ ಈ ಬಾರಿಯೂ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಜನ ಪರಿತಪಿಸುವ ಪರಿಸ್ಥಿತಿ ನಿಂತಿಲ್ಲ. ಹೌದು, ಸರಕಾರ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸುವ ಸಲುವಾಗಿ ಅನೇಕ ಯೋಜನೆಗಳನ್ನು ಜಾರಿಗೆಗೊಳಿಸುತ್ತಿದ್ದರೂ ಸಹ ಬೇಸಿಗೆಯ ಸಂದರ್ಭದಲ್ಲಿ ಮಳೆಯಾಶ್ರಿತ ಪ್ರದೇಶ ಹಾಗೂ ಬರಗಾಲ ಪೀಡಿತ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಸರಕಾರ ಹಾಗೂ ಜನಪ್ರತಿನಿಧಿಗಳನ್ನು ಗಂಭೀರವಾಗಿ ಕಾಡತೊಡಗಿದೆ. ಪ್ರತಿವರ್ಷ ಬೇಸಿಗೆಯ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕರ್‌ ನೀರು ಅವಲಂಬಿಸುತ್ತಿದ್ದ ಪರಿಸ್ಥಿತಿ ಕಳೆದ ವರ್ಷಗಳಿಗೆ ಹೋಲಿಸಿದರೆ ಮಳೆಗಾಲ ಪ್ರಮಾಣ ಹೆಚ್ಚಾಗಿರುವದರ ಜೊತೆಗೆ ಮೇವಿನ ಲಭ್ಯತೆಯೂ ಇರುವುದರಿಂದ ಈ ಬಾರಿ ಅಷ್ಟೊಂದು ನೀರಿನ ಅಭಾವ ಕಂಡುಬಾರದಿದ್ದರೂ ಬಿಸಿಲಿನ ತೀವ್ರತೆ ಹೆಚ್ಚಿದಂತೆ ಅಂತರ್ಜಲಮಟ್ಟ ಕುಸಿತ ಕಾಣುತ್ತಿದ್ದು, ನೀರಿಗಾಗಿ ಸಣ್ಣ ಪ್ರಮಾಣದ ಅಭಾವ ಈಗಿನಿಂದಲೇ ಆರಂಭವಾಗಿದೆ.ಬಹುಗ್ರಾಮ ಕುಡಿಯುವ ನೀರು ಪೂರೈಕೆ: ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಐದಾರು ವರ್ಷಗಳಿಂದ ಕುಡಿಯುವ ನೀರಿಗಾಗಿ ಸರಕಾರದ ನೆರವಿನೊಂದಿಗೆ ಟ್ಯಾಂಕರ್‌ ಕುಡಿಯುತ್ತಿದ್ದ ಜನರಿಗೆ ಇದೀಗ ಕಬ್ಬೂರ ಬಹುಗ್ರಾಮ ಕುಡಿಯುವ ನೀರು ಯೋಜನೆ ಮೂಲಕ ನಲ್ಲಿಗಳಿಗೆ ನೀರು ಪೂರೈಕೆಯಾಗುತ್ತಿರುವುದರಿಂದ ಬಹುಪಾಲು ಸಮಸ್ಯೆ ಕಡಿಮೆಯಾಗಿದೆ. ಅಲ್ಲದೇ ಜೈನಾಪೂರ ಬಹುಗ್ರಾಮ ಕುಡಿಯುವ ನೀರು ಯೋಜನೆಯೂ ಸಹ ಕೆಲ ಗ್ರಾಮಗಳನ್ನು ಹೊರತುಪಡಿಸಿ ಇನ್ನುಳಿದ ಗ್ರಾಮಗಳಿಗೆ ನೀರು ಪೂರೈಕೆ ಮಾಡುತ್ತಲಿದೆ.ಎಲ್ಲೆಲ್ಲಿ ಸಮಸ್ಯೆ: ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿರುವ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕೆಂಬ ಉದ್ದೇಶದಿಂದ ಸರಕಾರ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳಿಸಿದೆ. ಆದರೆ ತೋಟಪಟ್ಟಿಗಳಲ್ಲಿ ವಾಸವಾಗಿರುವ ಜನರು ಕೊರೆಯಿಸಿದ ಬಾವಿ ಹಾಗೂ ಬೋರವೆಲ್‌ಗಳಲ್ಲಿ ಅಂತರ್ಜಲಮಟ್ಟ ಕುಸಿತ ಕಂಡುಬರುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ನಾಗರಮುನ್ನೋಳಿ ಹೋಬಳಿಯ ಬಂಬಲವಾಡ, ಬೆಳಕೂಡ, ಉಮರಾಣಿ, ಡೋಣವಾಡ, ಇಟನಾಳ, ಹತ್ತರವಾಟ, ಮಾಂಗನೂರ, ಬಿದರೊಳ್ಳಿ, ತೋರಣಹಳ್ಳಿ ಗ್ರಾಮಗಳ ತೋಟಪಟ್ಟಿಗಳ ಜನರಿಗೆ ಸರಕಾರ ಬೋರವೆಲ್‌ ಕೊರೆಯಿಸಿರುವ ಬೋರವೆಲ್‌ಗಳಲ್ಲಿಯೂ ನೀರಿನಲ್ಲದೇ ಪರಿತಪಿಸುವ ಅನಿವಾರ್ಯತೆ ಬಂದೊದಗಿದೆ.ಮೇವು ಸಮಸ್ಯೆ: ಸತತ ಬರಗಾಲದ ಬೇಗುದಿಗೆ ಸಿಕ್ಕು ಜಾನುವಾರುಗಳ ಮೇವಿಗೂ ಸರಕಾರದ ಸಹಾಯಹಸ್ತ ಚಾಚುವ ಪರಿಸ್ಥಿತಿ ಕಂಡಿದ್ದ ಜನ ಈ ಬಾರಿ ಮೇವು ಬೆಳೆಗಳನ್ನೇ ಹೆಚ್ಚಾಗಿ ಬೆಳೆದಿರುವದರಿಂದ ಜಾನುವಾರುಗಳ ಮೇವಿಗಾಗಿ ಕಳೆದ ಬಾರಿಯಷ್ಟು ಸಮಸ್ಯೆ ಕಂಡುಬರುವುದಿಲ್ಲ. ಆದರೂ ಸಹ ಕೆಲಪ್ರದೇಶಗಳಲ್ಲಿ ಮಳೆ ಕೊರತೆಯಿಂದಾಗಿ ಮೇವು ಸಹ ಸರಿಯಾಗಿ ಬಾರದೇ ರೈತರು ಜಾನುವಾರುಗಳ ಮೇವಿಗಾಗಿ ಸರಕಾರದ ಸಹಾಯ ಪಡೆಯುವ ಸಾಧ್ಯತೆಗಳಿವೆ. ಬರಗಾಲದಿಂದ ಪ್ರತಿವರ್ಷ ಈ ಸಮಯದಲ್ಲಿ ಟ್ಯಾಂಕರ ನೀರು ಆಶ್ರಯಿಸುತ್ತಿದ್ದ ಜನತೆಗೆ ಈ ಬಾರಿ ನೀರಿನ ಸಮಸ್ಯೆ ಹಾಗೂ ಮೇವಿನ ಸಮಸ್ಯೆ ಹೆಚ್ಚಾಗಿಯಿಲ್ಲದಿದ್ದರೂ ತೋಟಪಟ್ಟಿ ಪ್ರದೇಶಗಳ ಜನರಿಗೆ ಕುಡಿಯಲು ಯೋಗ್ಯವಾಗಿರುವ ಟ್ಯಾಂಕರ ನೀರು ಪೂರೈಸಬೇಕಾದ ಅನಿವಾರ್ಯತೆ ಬರಬಹುದಾಗಿದ್ದು, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಮುಂಜಾಗ್ರತೆವಹಿಸಬೇಕಾಗಿದೆ.

loading...