ಮಹದಾಯಿ ಪಾಲು ಸಿಗುವರಗೆ ಹೋರಾಟ: ಮಜ್ಜಿಗುಡ್ಡ

0
14
loading...

ನರಗುಂದ: ಮಹದಾಯಿ ಉತ್ತರ ಕರ್ನಾಟಕದ ಜೀವಜಲವಾಗಿದ್ದು ಈ ಬೇಡಿಕೆ ಈಡೇರಿಸಲು ಸರ್ಕಾರಗಳು ವಿಫಲವಾಗಿ ಇಲ್ಲಿಯ ರೈತರನ್ನು ತೊಂದರೆಗೆ ಸಿಲುಕಿಸಿವೆ. ಹೀಗಾಗಿ ಮಹದಾಯಿ ನದಿಯ ನಮ್ಮ ಪಾಲು ದೊರೆಯುವವರೆಗೂ ರೈತರ ಈ ಹೋರಾಟ ಮುಂದುವರೆಯಲಿದೆ ಎಂದು ಕರವೇ ತಾಲೂಕ ಘಟಕದ ಅಧ್ಯಕ್ಷ ಎಚ್‌.ಎಚ್‌. ಮಜ್ಜಿಗುಡ್ಡ ತಿಳಿಸಿದರು.
ಮಹದಾಯಿ ಹಾಗೂ ಕಳಸಾ ಬಂಡೂರಿ ಅನುಷ್ಟಾನಕ್ಕೆ ಆಗ್ರಹಿಸಿ ನರಗುಂದ ತಾಲೂಕಿನ ರಡ್ಡೇರನಾಗನೂರ ಗ್ರಾಮದಿಂದ ನರಗುಂದದವರೆಗೆ ಮಾ. 27 ರಂದು ಕರವೇ ಹಾಗೂ ರೈತ ಸಮೋಹ ಪಾದಯಾತ್ರೆ ಹಮ್ಮಿಕೊಂಡ ಸಂದರ್ಭದಲ್ಲಿ ಬ್ರಹ್ಮಾನಂದ ಮಂದಿರದಲ್ಲಿ ಪೂಜೆ ಸಲ್ಲಿಸಿದ ನಂತರ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ನ್ಯಾಯಮಂಡಳಿ ಮಹದಾಯಿ ನೀರಿನ ವಿವಾದದ ಕೊನೆ ವಿಚಾರಣೆ ಫೆ. 21 ರಂದು ಮುಕ್ತಾಯಗೊಳಿಸಿದರೂ ಕೂಡಾ ಅದರ ತೀರ್ಪನ್ನು ಅಗಷ್ಟವರೆಗೆ ಕಾಯ್ದಿರಿಸಿದ ಕಾರಣಗಳೇನು ಎನ್ನುವುದನ್ನು ಸರ್ಕಾರಗಳು ಗೌಪ್ಯವಾಗಿ ಇರಿಸಿಕೊಂಡು ಉತ್ತರ ಕರ್ನಾಕಟದ ರೈತರಲ್ಲಿ ಗೊಂದಲ ಮೂಡಿಸಿವೆ. ಹೀಗಾಗಿ ರಾಜಕಾರಣಿಗಳಿಂದ ಈ ನೀರಿನ ಬೇಡಿಕೆ ಅನುಷ್ಟಾನಗೊಳ್ಳುವುದು ಬಹುತೇಕ ರೈತರಲ್ಲಿ ನಂಬಿಕೆ ಉಳಿದಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಇಂತಹ ಸರ್ಕಾರಗಳನ್ನು ಬೇರು ಸಹಿತ ಕಿತ್ತೊಗೆದು ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆಮಾಡಬೇಕಾದ ಅನಿವಾರ್ಯತೆ ಇದೆ. ರೈತರ ಬಹುವಾದ ಬೇಡಿಕೆಗಳನ್ನು ಈಡೇರಿಸಲು ಇದುವರೆಗೂ ಯಾವ ಸರ್ಕಾರಗಳು ಮನಸ್ಸು ಮಾಡಿಲ್ಲ. ವ್ಯಾಪಾರಿಕರಣ ದೃಷ್ಟಿಯಿಂದ ವಾಣಿಜೋದ್ಯಮಿಗಳ ಪರವಾಗಿ ನಿಲ್ಲುವ ಸರ್ಕಾರಗಳು ನಮಗೆ ಬೇಕಿಲ್ಲ. ಮಹದಾಯಿಯ ನಮ್ಮ ಪಾಲಿನ ನೀರು ಕೊಡಿಸುವ ಸರ್ಕಾರಬೇಕಿದೆ. ಈ ನಿಟ್ಟಿನಲ್ಲಿ ರೈತರು ರಾಜಕಾರಣಿಗಳ ಮರ್ಮ ಅರಿತು ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠಕಲಿಸಬೇಕೆಂದು ತಿಳಿಸಿದರು.
ರೈತ ಸೇನಾ ರೋಣ ತಾಲೂಕ ಘಟಕದ ಅದ್ಯಕ್ಷ ಮುತಪ್ಪ ಕುರಿ ಮಾತನಾಡಿ, ಪಾದಯಾತ್ರೆಯು ಖಾನಾಪೂರ ಮಾರ್ಗವಾಗಿ ಹದಲಿ ಗ್ರಾಮದ ಮೂಲಕ ಯಾವಗಲ್‌ ಗ್ರಾಮಕ್ಕೆ ತೆರಳಿ ಅಲ್ಲಿ ವಾಸ್ತವ್ಯ ಮಾಡಿ ನಂತರ ಮಾ. 28 ರಂದು ಪಾದಯಾತ್ರೆ ಮೂಲಕ ನರಗುಂದದಲ್ಲಿ ರೈತರು ಮಹದಾಯಿಗಾಗಿ ನಡೆಸಿದ ಧರಣಿಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವಿರೇಶಸ್ವಾಮಿ ಸೊಬರದಮಠ, ಎಸ್‌.ಬಿ. ಜೋಗಣ್ಣವರ, ರಮೇಶ ನಾಯ್ಕರ್‌, ಸುಬಾಷ್‌ ಗಿರಿಯಣ್ಣವರ, ಈರಣ್ಣ ಸೊಪ್ಪಿನ, ಮುರುಗಯ್ಯ ಹಿರೇಮಠ, ವೈ.ಎಚ್‌. ಬಡಿಗೇರ, ಯಲ್ಲಪ್ಪ ಮಲ್ಲಾಪೂರ, ಎಸ್‌.ಎಸ್‌. ವೀರನಗೌಡ್ರ, ಬಸನಗೌಡ ಪಾಟೀಲ, ಮುದಿಯಪ್ಪ ಮಲ್ಲಾಪೂರ, ರವಿ ಮಲ್ಲಾಪೂರ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.

loading...