ಮಹಿಳೆ ಅಭಿವೃದ್ಧಿಗಾಗಿ ಶ್ರಮಿಸಬೇಕು: ಜಿಲ್ಲಾಧಿಕಾರಿ ಬೊಮ್ಮನಹಳ್ಳಿ

0
16
loading...

ಕನ್ನಡಮ್ಮ ಸುದ್ದಿ- ಧಾರವಾಡ: ಮಹಿಳೆಯರ ಮೇಲೆ ಆಗುವ ದೌರ್ಜನ್ಯ, ಅತ್ಯಾಚಾರ, ಅನ್ಯಾಯಗಳನ್ನು ಪ್ರತಿಭಟಿಸಿ ಸಂಘಟಿತರಾಗಿ ಹೋರಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ ಹೇಳಿದರು. ಡಾ.ಮಲ್ಲಿಕಾರ್ಜುನ ಮನಸೂರ ಕಲಾಭವನ ಆವರಣದಲ್ಲಿ ಜಿಲ್ಲಾ ಪಂಚಾಯತ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಸ್ವೀಪ್‌ 2018 ಹಾಗೂ ಸ್ವಚ್ಚ ಭಾರತ ಅಭಿಯಾನ ಸಹಯೋಗದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರ ತಾಳ್ಮೆಗೂ ಒಂದು ಮಿತಿ ಇರಬೇಕು. ಮುಂಚೂಣಿಯಲ್ಲಿರುವ ಮಹಿಳೆಯರು ಸಮಾಜದಲ್ಲಿ ಶೋಷಣೆ, ಅನ್ಯಾಯ ಮತ್ತು ನಿರ್ಲಕ್ಷ್ಯಕ್ಕೆ ಒಳಗಾದ ಮಹಿಳೆಯರ ಅಭಿವೃದ್ಧಿಗಾಗಿ ಶ್ರಮಿಸಬೇಕು. ಮಹಿಳಾ ಅಭಿವೃದ್ಧಿಗಾಗಿ ಸರಕಾರ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಈ ಮೂಲಕ ಅವರ ಆರ್ಥಿಕ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಿದೆ. ಮಹಿಳೆಯರಲ್ಲಿ ಆರ್ಥಿಕ ಸಬಲತೆ ಬಂದಾಗ ಮಾತ್ರ ಅವರಿಗೆ ಧ್ವನಿ ಬರುತ್ತದೆ ಎಂದು ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಒಂದು ಪವಿತ್ರ ಕಾರ್ಯ.
ಮಹಿಳೆಯರು ಆಮಿಷಗಳನ್ನು ಧಿಕ್ಕರಿಸಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಉತ್ತಮ ಮತ್ತು ಸಾಮಾಜಿಕ ಕಳಕಳಿ ಹೊಂದಿರುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಹಿಂದಿನ ಚುನಾವಣೆಗಳಲ್ಲಿ ಶೇ.65 ರಿಂದ 70ರಷ್ಟು ಮಾತ್ರ ಮತದಾನವಾಗಿದೆ. ಮತದಾನ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಎಲ್ಲರೂ ಮತ್ತು ಕಡ್ಡಾಯವಾಗಿ ಮತ ಚಲಾಯಿಸುವಂತೆ ಜಾಗೃತಿ ಮೂಡಿಸಬೇಕು. ಮಹಿಳೆಯರು ತಮ್ಮ ಕುಟುಂಬ ಸದಸ್ಯರಿಗೂ ತಿಳುವಳಿಕೆ ನೀಡಿ ನ್ಯಾಯಸಮ್ಮತ ಮತದಾನಕ್ಕೆ ಪ್ರೇರೇಪಿಸಬೇಕು. ಪುರುಷ ಮತದಾರರು ಆಮಿಷಗಳಿಗೆ ಒಳಗಾಗದಂತೆ ಜಾಗೃತಿ ಮೂಡಿಸಿ, ತಮ್ಮ ಹಕ್ಕು ಚಲಾಯಿಸಬೇಕೆಂದರು. ಚುನಾವಣೆ ಸಂದರ್ಭದಲ್ಲಿ ಸ್ತ್ರೀ ಶಕ್ತಿ ಸಂಘಗಳ ಮೂಲಕ ಅಥವಾ ನೇರವಾಗಿ ಮಹಿಳೆಯರಿಗೆ ವಿವಿಧ ರೀತಿಯ ಆಮಿಷಗಳನ್ನು ತೋರಿಸಿ ಮತದಾನದ ಹಕ್ಕನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾವುದೇ ರೀತಿಯ ಆಮಿಷಗಳಿಗೆ ಮಹಿಳೆಯರು ಮತ್ತು ಕುಟುಂಬಗಳ ಸದಸ್ಯರು ಒಳಗಾಗದೇ ಮುಕ್ತವಾಗಿ ನ್ಯಾಯಸಮ್ಮತ ಮತದಾನ ಮಾಡಬೇಕು ಎಂದು ಹೇಳಿದರು.
ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ರಾಮಚಂದ್ರ ಹುದ್ದಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನವಿದೆ. ಪ್ರತಿ ಕುಟುಂಬದಲ್ಲಿ ಮಹಿಳೆಯರ ಮಾತಿಗೆ ಬೆಲೆ, ಗೌರವ ಮತ್ತು ವಿಶ್ವಾಸವಿದೆ. ಬದಲಾವಣೆ ಮನೆಯಿಂದಲೇ ಆರಂಭವಾಗಬೇಕು. ಸಂಸ್ಕಾರ, ಸಂಸ್ಕೃತಿಗಳು ಮುಂದುವರೆಯಲು ಮಹಿಳೆಯರೇ ಕಾರಣರು. ಮಹಿಳಾ ಜಾಗೃತಿ ಮಹತ್ವವಾಗಿರುವುದರಿಂದ ಕುಟುಂಬ ಮೌಲ್ಯಗಳನ್ನು ಕಾಪಾಡುವುದು ಪುರುಷ ಮತ್ತು ಮಹಿಳೆಯ ಜವಾಬ್ದಾರಿಯಾಗಿದೆ ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತರು ಮತ್ತು ಕರ್ನಾಟಕ ಸಂಗೀತ ಮಹಾವಿದ್ಯಾಲಯದ ಅತಿಥಿ ಪ್ರಾಧ್ಯಾಪಕರಾಗಿರುವ ಡಾ.ಶಕ್ತಿ ಪಾಟೀಲ, ನ್ಯಾಯವಾದಿ ಶ್ರೀಮತಿ ಪ್ರಫುಲ್ಲಾ ನಾಯಕ, ಜಿಲ್ಲಾ ಪಂಚಾಯತ್‌ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಸ್ನೇಹಲ್‌, ಎಸ್‌.ಎಸ್‌.ಬಳ್ಳೊಳ್ಳಿ, ಎಸ್‌.ವಿ.ಶ್ರೀಕಾಂತ, ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಿಣ್ಣನ್ನವರ್‌ ಆರ್‌ ಎಸ್‌ ಮತ್ತು ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆ ಹಾಗೂ ಅಸಾಧಾರಣ ಪ್ರತಿಭೆ ಮೆರೆದ ಬಾಲ ಪ್ರತಿಭೆಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಬಸವರಾಜ ಕಲಾದಗಿ ಸ್ವಾಗತಿಸಿದರು. ಸುಜತಾ ಮುರಹರಿ ನಿರೂಪಿಸಿದರು. ಎಸ್‌.ಬಿ.ಮಾಸಮಡ್ಡಿ ವಂದಿಸಿದರು.

loading...