ಮಾ.15 ರಂದು ಯಲ್ಲಾಪುರಕ್ಕೆ ಕುಮಾರಸ್ವಾಮಿ

0
21
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಜೆಡಿಎಸ್‌ ಪಕ್ಷದ ಘೋಷಿತ ಅಭ್ಯರ್ಥಿ ರವೀಂದ್ರನಾಥ ನಾಯ್ಕ ವಿರುದ್ಧ ಪಕ್ಷದ ಕಾರ್ಯಕರ್ತರೆಲ್ಲರೂ ಸೇರಿ ಮಾ.15 ರಂದು ಯಲ್ಲಾಪುರಕ್ಕೆ ಆಗಮಿಸಲಿರುವ ಕುಮಾರಸ್ವಾಮಿ ಅವರ ಬಳಿ ಅಭ್ಯರ್ಥಿಯನ್ನು ಬದಲಾಯಿಸುವಂತೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಜೆ.ಡಿ.ಎಸ್‌ ತಾಲೂಕಾಧ್ಯಕ್ಷ ವಿ.ವಿ.ಜೋಶಿ ಹೇಳಿದರು.
ಅವರು ಅಂಬೇಡ್ಕರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆ.ಡಿ.ಎಸ್‌ ಅಸ್ತಿತ್ವ ಉಳಿಸುವ ದಿಸೆಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸುತ್ತಿರುವ ಸಂತೋಷ ರಾಯ್ಕರ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದರೆ ಪಕ್ಷದ ಮರ್ಯಾದೆ ಉಳಿಯುತ್ತದೆ ಎಂಬ ವಿಶ್ವಾಸ ನಮ್ಮೆಲ್ಲರದ್ದಾಗಿದೆ. ಸ್ಥಳೀಯರಾದ ಸಂತೋಷ ರಾಯ್ಕರ ಅಭ್ಯರ್ಥಿಯಾದರೆ ಮಾತ್ರ ತಾಲೂಕಾ ಘಟಕದ ಸಂಪೂರ್ಣ ಸಹಕಾರ ನೀಡಲಿದ್ದೇವೆ . ಇದನ್ನು ಗಂಭೀರವಾಗಿ ಮನಗಾಣದಿದ್ದರೆ ಭವಿಷ್ಯದಲ್ಲಿ ಪಕ್ಷಕ್ಕೆ ಅಪಾರ ಹಾನಿ ಸಂಭವಿಸಲಿದೆೆ ಎಂದರು. ತಾಲೂಕಾ ಉಪಾಧ್ಯಕ್ಷೆ ನೂರ್‌ಜಹಾನ್‌ ಮಾತನಾಡಿ, ಪಕ್ಷದ ಕಾರ್ಯಕರ್ತರನ್ನು ಇತ್ತೀಚೆಗೆ ತೀರಾ ಕಡೆಗಾಣಿಸುತ್ತಿರುವ ಪರಿಣಾಮ ನಮ್ಮೆಲ್ಲರಿಗೆ ಬೇಸರ ಉಂಟಾಗುತ್ತಿದೆ. ಪಕ್ಷದ ಯಾವುದೇ ಕಾರ್ಯಕ್ರಮ, ಸಭೆ -ಸಮಾರಂಬಗಳ ಕುರಿತಂತೆ ಯಾವುದೇ ಮಾಹಿತಿಯನ್ನು ರವೀಂದ್ರ ನಾಯ್ಕ ನೀಡುತ್ತಿಲ್ಲ. ಪಕ್ಷದ ಬೆಳವಣಿಗೆಗಾಗಿ ಶ್ರಮಪಟ್ಟು ದುಡಿಯುತ್ತಿರುವ ಕಾರ್ಯಕರ್ತರಿಗೆ ಸ್ವಲ್ಪವೂ ಗೌರವಗಳನ್ನು ನೀಡುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಹಿರಿಯ ಮುಖಂಡ ಜಿ.ಕೆ.ಭಟ್ಟ , ತಾಲೂಕಾ ಪ್ರಧಾನ ಕಾರ್ಯದರ್ಶಿ ಎ.ಎಸ್‌.ಸಂಗೂರುಮಠ, ಪ್ರಮುಖರಾದ ಆರ್‌.ಪಿ.ಹೆಗಡೆ, ಮುಚುಕುಂದ ಹೆಗಡೆ, ಸುಧಾಕರ ನಾಯ್ಕ, ಗೋಪಾಲ ಹೆಗಡೆ, ಶೇಷು ನಾಯ್ಕ, ಪ್ರಕಾಶ ಚಂದ್ರಾಪುರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

loading...