ಮಾ.24ರಿಂದ ರಾಮರಥೋತ್ಸವ ಕಾರ್ಯಕ್ರಮ

0
24
loading...

ಕನ್ನಡಮ್ಮ ಸುದ್ದಿ-ಶಿರಸಿ: ಇಲ್ಲಿನ ಸದ್ಗುರು ನಿತ್ಯಾನಂದ ಮಂದಿರದಲ್ಲಿ ರಾಮನವಮಿ ಉತ್ಸವ ಹಾಗೂ ದ್ವಿತೀಯ ವಾರ್ಷಿಕ ರಾಮರಥೋತ್ಸವ ಕಾರ್ಯಕ್ರಮ ಮಾ.24ರಿಂದ ಮಾ.26ರವರೆಗೆ ನಡೆಯಲಿದೆ.
ಶ್ರೀ ಸದ್ಗುರು ನಿತ್ಯಾನಂದ ಸೇವಾ ಸಮಿತಿ ಅಧ್ಯಕ್ಷ ವಿಷ್ಣು ಹರಿಕಾಂತ ಈ ಕುರಿತು ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿ,
ಸದ್ಗುರು ಮಹಾಬಲಾನಂದ ಸ್ವಾಮೀಜಿಯವರು ಸದ್ಗುರು ನಿತ್ಯಾನಂದ ಮಂದಿರದಲ್ಲಿ ಕಟ್ಟಿದ ಶ್ರೀರಾಮಾಂಜನೇಯ ದೇವಾಲಯದಲ್ಲಿ ರಾಮನವಮಿ ಉತ್ಸವ ನಡೆಯಲಿದೆ. ಮಾ.24 ಮತ್ತು 25ರಂದು ಮುಂಜಾನೆ 7 ಗಂಟೆಯಿಂದ ಅಖಂಡ ಶ್ರೀರಾಮ ತಾರಕ ಜಪ ನಡೆಯಲಿದೆ. ಮಾ.25ರಂದು ಮುಂಜಾನೆ 6ರಿಂದ 7 ಗಂಟೆಯವರೆಗೆ ಸದ್ಗುರು ನಿತ್ಯಾನಂದ, ಸದ್ಗುರು ಮಹಾಬಲಾನಂದ ಸ್ವಾಮೀಜಿ ಹಾಗೂ ರಾಮಾಂಜನೇಯ ಸೀತಾ, ಲಕ್ಷ್ಮಣ, ಉಮಾಮಹೇಶ್ವರ, ಗಣಪತಿ, ಶನೈಶ್ಚರ ದೇವರಿಗೆ ಅಭಿಷೇಕ, ಸೀತಾ ಮತ್ತು ಉಮಾಮಹೇಶ್ವರಿ ದೇವಿಗೆ ಉಡಿ ಸೇವೆ ನಡೆಯುವುದು. ಮಧ್ಯಾಹ್ನ 11.30ರಿಂದ ಮಠದ ಆವರಣದಲ್ಲಿ ಪಲ್ಲಕ್ಕಿ ಮೆರವಣಿಗೆ ಹಾಗೂ ಮಧ್ಯಾಹ್ನ 3.30ರಿಂದ ನಗರದಲ್ಲಿ ಮೆರವಣಿಗೆ ನಡೆಯಲಿದೆ. ರಾತ್ರಿ 8 ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯುವುದು ಎಂದು ತಿಳಿಸಿದರು.
ಮಾ.26ರಂದು ಮುಂಜಾನೆ 6ಕ್ಕೆ ಮಹಾಭಿಷೇಕ, ಮಧ್ಯಾಹ್ನ 5.30ಕ್ಕೆ ರಥಾರೋಹಣ ಪೂಜೆ, ರಥಾನಯನ, ರಥಾವರೋಹಣ ನಂತರ ವಸಂತೋತ್ಸವ, ಅಷ್ಟಾವಧಾನ ಪೂಜೆ, ಮಹಾಮಂಗಳಾರತಿ ನಡೆಯುವುದು. ರಾತ್ರಿ 8 ಗಂಟೆಯಿಂದ ಬೈಲಹೊಂಗಲ ಆನಂದಾಶ್ರಮದ ವಿಜಯಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಇದೇ ವೇಳೆ ಮಠದ ಶ್ರೇಯೋಭಿವೃದ್ಧಿಗೆ ಕೊಡುಗೆ ನೀಡಿದ ದಾನಿಗಳಿಗೆ ಗೌರವ ಸಮರ್ಪಣೆ ನಡೆಯುವುದು. ಕೊಳಗಿಬೀಸ್‌ನ ಕುಮಾರ ಭಟ್ಟ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ನಂತರ ಯುಗಪುರುಷ ಶ್ರೀರಾಮನ ಕುರಿತು ಪ್ರವಚನ ನಡೆಸಿ ಕೊಡುವರು ಎಂದರು.
ಈ ವೇಳೆ ಸಮಿತಿ ಉಪಾಧ್ಯಕ್ಷ ರಾಮ ಮೊಗೇರ, ಪ್ರಣವಾನಂದ ಸರಸ್ವತೀ ಸ್ವಾಮೀಜಿ, ಎಂ.ಜೆ.ಹರಿಕಾಂತ, ಲಿಂಗಪ್ಪ ಕೊಂಡ್ಲಿ ಇದ್ದರು.

loading...