ರಂಗಭೂಮಿ ಕಲೆಯನ್ನು ಬೆಳೆಸಿ: ನಾಯ್ಕ

0
26
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ರಂಗಭೂಮಿ ಕಲೆ ಇಂದು ಅಳಿವಿನ ಅಂಚಿನಲ್ಲಿದೆ. ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಪತ್ರಕರ್ತ ರಾಜಶೇಖರ ನಾಯ್ಕ ಹೇಳಿದರು.
ಅವರು ತಾಲೂಕಿನ ಕಾತೂರ ಗ್ರಾಮದಲ್ಲಿ ಶ್ರೀಗುರು ಕಲಾವಿದರ ಬಳಗ(ರಿ)ರವರು ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ‘ಮಗ ಹೋದರೂ ಮಾಂಗಲ್ಯ ಬೇಕು’ ಎಂಬ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು. ರಂಗಭೂಮಿ ಕಲಾವಿದ ರವಿಕಾಂತ ಆಲದಕಟ್ಟಿ ಅವರು ರಂಗಭೂಮಿ ಕಲೆಯನ್ನು ಉಳಿಸುವಲ್ಲಿ ಹೆಚ್ಚಿನ ಪ್ರಯತ್ನ ನಡೆಸಿದ್ದಾರೆ. ಅವರ ಪರಿಶ್ರಮದಿಂದ ಮುಂಡಗೋಡ ತಾಲೂಕಿನಲ್ಲಿ ರಮಗಭೂಮಿ ಕಲೆ ಉಳಿದುಕೊಂಡಿದೆ. ರವಿಕಾಂತ ಆಲದಕಟ್ಟಿ ಮತ್ತು ಅವರ ತಂಡದವರಿಗೆ ಎಲ್ಲರ ಸಹಕಾರ ಅಗತ್ಯ ಎಂದು ಅವರು ಹೇಳಿದರು. ಶ್ರೀಗುರು ಕಲಾವಿದರ ಬಳಗದ ಅಧ್ಯಕ್ಷ ರವಿಕಾಂತ ಆಲದಕಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ ಮಹಾರಾಜರ ಕಾಲದಿಂದ ನಡೆದುಬಂದ ಕಲೆ ರಂಗಭೂಮಿ ಕಲೆ. ಇದರಲ್ಲಿ ನನಗೆ ನೆಮ್ಮದಿ ತೃಪ್ತಿ, ಸಿಕ್ಕಿದೆ ಹಣ ಗಳಿಸುವ ಆಸೆ ಇಲ್ಲ ಎಂದು ಹೇಳಿದರು. ಮಾಜಿ ಜಿ.ಪಂ ಅಧ್ಯಕ್ಷ ರಾಮಕೃಷ್ಣ ಮೂಲಿಮನಿ ಮಾತನಾಡಿ, ಕಳೆದ 25 ವರ್ಷಗಳಿಂದ ಈ ತಂಡವು ನಾಟಕಗಳನ್ನು ಪ್ರದರ್ಶಿಸುತ್ತಾ, ಮನರಂಜಿಸುತ್ತಾ ಬಂದಿದೆ. ಇಂದಿನ ಪೀಳಿಗೆ ಟಿ.ವಿ., ಮೊಬೈಲ್‌ ಹಾಗೂ ಕಂಪ್ಯೂಟರ್‌ಗಳತ್ತ ಮಾರು ಹೋಗುತ್ತಿರುವುದರಿಂದ ರಂಗಭೂಮಿ ಕಲೆ ನಶಿಸುತ್ತಾ ಬಂದಿದೆ. ನಾವೆಲ್ಲರೂ ಸೇರಿ ರಂಗಭೂಮಿ ಕಲೆಯನ್ನು ಬೆಳೆಸೋಣ ಎಂದರು.
ಇದೇ ಸಂದರ್ಭದಲ್ಲಿ ಪತ್ರಕರ್ತ ಜಗದೀಶ ದೈವಜ್ಞ, ರಾಜಶೇಖರ ನಾಯ್ಕ, ರಂಗಭೂಮಿ ಕಲಾವಿದೆ ರಾಜೇಶ್ವರಿ ಸಿದ್ದಿ, ವಿ.ಟಿ.ಭಟ್‌ ಕನಕಳ್ಳಿ, ಆನಂದ ದೇವಾಡಿಗ ಶಾನವಳ್ಳಿ, ಮಹಮ್ಮದಸಾಬ ಶೇಖ ಹಾಗೂ ಈಶ್ವರ ಅಂತೋಜಿಯವರನ್ನು ಸನ್ಮಾನಿಸಲಾಯಿತು. ಮಹದೇವ ಗಾವಡೇಕರ, ಪೀರಪ್ಪ ಲಕ್ಮಾಪೂರ, ವಿ.ಜಿ.ಮೂಡುರ, ನಾಗರಾಜ ಜನಗೇರಿ, ನಿಶೀಮಣ್ಣಾ ಚನ್ನಾಪೂರ, ಗಂಗಾಧರ ಹಿರೇಮಠ ಇದ್ದರು. ಗಿರೀಶ ಬಿ.ವಿ. ಸ್ವಾಗತಿಸಿ ನಿರೂಪಿಸಿದರು.

loading...