ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನ-ಐತಿಹಾಸಿಕ ತೀರ್ಮಾನ : ತೋಂಟದ ಶ್ರೀಗಳು

0
25
loading...

ಗದಗ: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಂಪುಟದ ಸದಸ್ಯರು ನಾಗಮೋಹನದಾಸ ಸಮಿತಿ ವರದಿ ಸ್ವೀಕರಿಸಿ ಲಿಂಗಾಯತ ಧರ್ಮಕ್ಕೆ ಮತ್ತು ಬಸವತತ್ವ ಅನುಸರಿಸುವ ವೀರೈಶವ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ನಿರ್ಧರಿಸಿರುವುದು ಹಾಗೂ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿರುವದು ಒಂದು ಐತಿಹಾಸಿಕ ತೀರ್ಮಾನ ಎಂದು ಗದುಗಿನ ಜ.ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಸ್ವಾಗತಿಸಿದ್ದಾರೆ.

ತೋಂಟದಾರ್ಯ ಮಠದಲ್ಲಿ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಲಿಂಗಾಯತರಿಗೆ ಬಸವ ಅನುಯಾಯಿಗಳಿಗೆ ಈ ಸ್ಥಾನಮಾನ ಸಿಗುವುದರ ಮೂಲಕ ಬಡ ಮತ್ತು ಹಿಂದುಳಿದ ಲಿಂಗಾಯತರ ಜನಜೀವನಮಟ್ಟ ಸುಧಾರಿಸಲಿದೆ. ಹೆಚ್ಚಿನ ಆರ್ಥಿಕ ಮತ್ತು ಶೈಕ್ಷಣಿಕ ಸೌಲಭ್ಯಗಳು ಈ ಜನಾಂಗಕ್ಕೆ ದೊರೆಯಲಿವೆ. ಯಗಾದಿಯ ಈ ಶುಭಸಂದರ್ಭದಲ್ಲಿ ಬಸವಶಕೆ ಆರಂಭವಾದಂತಾಗಿದೆ ಎಂದರು.
ಜಗತ್ತಿನ ಮೊಟ್ಟಮೊದಲ ವಿಚಾರವಾದಿ ಮತ್ತು ಭಾರತದ ಮಾರ್ಟಿನ ಲೂಥರ್ ಕಿಂಗ್ ಎಂದು ಪ್ರಸಿದ್ಧಿ ಪಡೆದಿದ್ದ 900 ವರ್ಷಗಳ ಹಿಂದೆ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ. ಅದರ ಸ್ಥಾಪಕ ಬಸವಣ್ಣ ಅದರ ಆಚಾರ ವಿಚಾರಗಳು ಬೇರೆ. ವೀರಶೈವ ಧರ್ಮ ಅದರಲ್ಲಿ ಬಂದು ಸೇರಿಕೊಂಡು ಲಿಂಗಾಯತ ಧರ್ಮವನ್ನು ಕಲುಷಿತಗೊಳಿಸಿದೆ ಎಂದು ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ನೀಡಿದ ವರದಿ ಲಿಂಗಾಯತರಿಗೆ ಒಂದು ಕ್ರಾಂತಿಕಾರಕ ವರದಿಯಾಗಿದೆ.

ಚರಿತ್ರೆಯನ್ನು ಅರಿಯದವರು ಚರಿತ್ರೆಯನ್ನು ಸೃಷ್ಠಿಸಲಾರರು ಎಂಬ ಮಾತಿನಂತೆ ಚರಿತ್ರೆಯನ್ನು ಅರಿತ ಮುಖ್ಯಮಂತ್ರಿ ಸಿದ್ಧರಾಮಯ್ಯ, ಎಂ.ಬಿ.ಪಾಟೀಲ, ಬಸವರಾಜ ಹೊರಟ್ಟಿ, ವಿನಯ ಕುಲಕರ್ಣಿ, ಬಸವರಾಜ ರಾಯರೆಡ್ಡಿ, ಶರಣಪ್ರಕಾಶ ಪಾಟೀಲ ಮತ್ತು ನಿವೃತ್ತ ಐ.ಎ.ಎಸ್.ಅಧಿಕಾರಿ ಎಸ್.ಎಂ.ಜಾಮದಾರ ಮುಂತಾದ ನಾಯಕರು ಹೊಸ ಚರಿತ್ರೆಯನ್ನು ಸೃಷ್ಠಿಸಿದ ಶ್ರೇಯಸ್ಸಿಗೆ ಭಾಜನರಾಗಿದ್ದಾರೆ.
ಬಸವ ಅನುಯಾಯಿಯಾಗಿರುವ ಇವರು ರಾಜ್ಯದ ಪುರೋಹಿತಶಾಹಿ, ಪುರೋಗಾಮಿ ಮತ್ತು ಬೆರಳಣಿಕೆಯಷ್ಟು ಇರುವ ಸ್ವಾಮಿಗಳ ಗೊಡ್ಡು ಬೆದರಿಕೆಗಳಿಗೆ ಮಣಿಯದೇ ಸತ್ಯದ ಪರವಾದ ನಿರ್ಣಯ ತೆಗೆದುಕೊಂಡು ಕೋಟ್ಯಾಂತರ ಜನರ ಭಾವನೆಗಳನ್ನು ಗೌರವಿಸಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಾಕಷ್ಟು ಪುರಾವೆಗಳಿವೆ. ಅವುಗಳನ್ನು ಮತ್ತೊಮ್ಮೆ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದ ಸಮಿತಿ ಸಂಗ್ರಹಿಸಿ ಅಧ್ಯಯನ ಮಾಡಿ ನ್ಯಾಯಸಮ್ಮತವಾದ ವರದಿ ನೀಡಿದ ಸಮಿತಿಯನ್ನು ಅಭಿನಂದಿಸಿದರು.

loading...