ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಿ: ನಾಯ್ಕ

0
28
loading...

ಕನ್ನಡಮ್ಮ ಸುದ್ದಿ-ಭಟ್ಕಳ: ವಿದ್ಯಾರ್ಥಿಗಳು ತಮ್ಮ ಜೀವನದ ಮುಂದಿನ ಗುರಿಯನ್ನು ಪದವಿ ತರಗತಿಯಲ್ಲಿರುವಾಗಲೇ ಹಾಕಿಕೊಂಡಾಗ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುವುದು ಎಂದು ಇಲ್ಲಿನ ಪ್ರಧಾನ ಸಿವಿಲ್‌ ನ್ಯಾಯಾಧೀಶ ಹನುಮಂತರಾವ್‌ ಕುಲಕರ್ಣಿ ಹೇಳಿದರು.
ಅವರು ಆಸರಕೇರಿ ಶ್ರೀ ವೆಂಕಟರಮಣ ಸಭಾ ಭವನದಲ್ಲಿ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದು ಅನೇಕ ಅವಕಾಶಗಳು ತೆರೆದುಕೊಂಡಿದ್ದು ಬೇರೆ ಬೇರೆ ಅಧ್ಯಯನಕ್ಕೆ ಹೋಗಲು ಸಾಧ್ಯವಾಗುವುದು. ಅವುಗಳನ್ನೆಲ್ಲ ತಮ್ಮ ಉಪನ್ಯಾಸಕರು, ಮಾರ್ಗದರ್ಶಕರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಂಡರೆ ನಿಮ್ಮ ಭವಿಷ್ಯ ಉಜ್ವಲವಾಗುವುದು ಎಂದೂ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಆರ್‌. ನಾಯ್ಕ ಮಾತನಾಡಿ ಇದು ವಿದ್ಯಾರ್ಥಿ ಜೀವನದಿಂದ ಸಾಮಾಜಿಕ ಜೀವನಕ್ಕೆ ಕಾಲಿಡುವ ಹಂತವಾಗಿದ್ದು ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಇಂದು ಯಾವುದೇ ಪದವಿ, ಸ್ನಾತಕೋತ್ತರ ಪದವಿಯನ್ನು ಹೊಂದಿದ್ದರೂ ಸಹ ಕೌಶಲ್ಯವಿಲ್ಲದಿದ್ದರೆ ಸಮಾಜದಲ್ಲಿ ಮುಂದೆ ಬರುವುದು ಕಷ್ಟಸಾಧ್ಯ. ಪ್ರತಿಯೊರ್ವರೂ ಕೂಡಾ ಕೌಶಲ್ಯವನ್ನು ಬೆಳೆಸಿಕೊಂಡಾಗ ಮಾತ್ರ ಉತ್ತಮ ಭವಿಷ್ಯ ಹೊಂದಲು ಸಾಧ್ಯವಾಗುವುದು. ನೀವು ಕೌಶಲ್ಯವನ್ನು ಹೊಂದಿದಲ್ಲಿ ನಿಮ್ಮನ್ನು ಕರೆದು ನೌಕರಿ ಕೊಡುವ ಕಂಪೆನಿಗಳೂ ಕೂಡಾ ಇವೆ ಎಂದ ಅವರು ಓದು, ಸರ್ಟಿಫಿಕೇಟ್‌ ಕೇವಲ ನೀವು ಅಕ್ಷರಸ್ಥರನ್ನುವುದಕ್ಕೆ ಮಾತ್ರವಾಗಹುದೇ ವಿನಹ ಕೌಶಲ್ಯವಿಲ್ಲದ ವಿದ್ಯೆ ನಿಮಗೆ ಯಾವುದೇ ರೀತಿಯಿಂದ ಸಹಾಯವಾಗಲು ಎಂದರು. ಜೀವನದಲ್ಲಿ ದೃಢ ಸಂಕಲ್ಪವನ್ನು ಹೊಂದಿರುವಂತೆಯೂ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಮಂಜುಳಾ ಕೆ.ಪಿ. ವಹಿಸಿದ್ದರು.
ವೇದಿಕೆಯಲ್ಲಿ ಪ್ರೊ. ಡಾ. ಭಾಗೀರಥಿ ನಾಯ್ಕ, ಸುಕ್ರ ಗೊಂಡ, ಫಾರೂಕ್‌ ಶೇಖ್‌, ನರಸಪ್ಪ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ, ಕಾಲೇಜಿನ ಪಠ್ಯ ಚಟುವಟಿಕೆಗಳಲ್ಲಿ ಉತ್ತಮ ಅಂಕಗಳಿಸಿದವರಿಗೆ, ಅಂತರ್‌ ಕಾಲೇಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದವರಿಗೆ, ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಮಾರಿ ಯೋಗಿನಿ, ನಸ್ರೀನ್‌ ಬಹುಮಾನಿತರ ಯಾದಿಯನ್ನು ಓದಿದರು. ಪ್ರೊ. ಪ್ರೇಮಾ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಶೈಲಜಾ ಹಾಗೂ ಪ್ರೊ. ಮಂಜುಳಾ ವರದಿ ಓದಿದರು. ಕುಮಾರಿ ನಮಿತಾ ಹಾಗೂ ರೇಶ್ಮಾ ಕಾರ್ಯಕ್ರಮ ನಿರೂಪಿಸಿದರು.

loading...