ಶಾಲಾ ನವೀಕರಣ ಕಾಮಗಾರಿಯ ವೀಕ್ಷಿಸಿದ: ಸಚಿವ ಕುಲಕರ್ಣಿ

0
19
loading...

ಕನ್ನಡಮ್ಮ ಸುದ್ದಿ- ಧಾರವಾಡ: ಉಪ್ಪಿನ ಬೆಟಗೇರಿ ಗ್ರಾಮದ ಗುಡ್ಡದ ಮೇಲೆ ಊರಿನ ಇತಿಹಾಸದ ಪ್ರತೀಕವಾಗಿ ಈಗ ಏಕೈಕವಾಗಿ ಉಳಿದಿರುವ ಹಾಗೂ ಪ್ರಸಕ್ತ ಅಳಿವಿನಂಚಿನಲ್ಲಿರುವ ಕಿಲ್ಲಾ (ಭತೇರಿ) ವನ್ನು ಆಧುನಿಕವಾಗಿ ಸಂರಕ್ಷಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. ಉಪ್ಪಿನ ಬೆಟಗೇರಿಯಲ್ಲಿ ಐತಿಹಾಸಿಕ ಹಿನ್ನೆಲೆಯ ಕಿಲ್ಲಾವನ್ನು ಸಂರಕ್ಷಿಸಲು ಹಾಗೂ ಆಳವಾದ ತಗ್ಗು ದಿಣ್ಣೆಯಿಂದ ಕೂಡಿರುವ ವಿಶಾಲವಾದ ಗುಡ್ಡದ ಜಾಗೆಯನ್ನು ಮೈದಾನವಾಗಿ ನಿರ್ಮಿಸುವ ಕಾಮಗಾರಿ ಪ್ರಾರಂಭಿಸಲು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ಗ್ರಾಮದ ಗುಡ್ಡದ ಮೇಲೆ ಇರುವ ಬೇಕಾಬಿಟ್ಟಿ ಕಲ್ಲು ಗಣಿಗಾರಿಕೆಯಿಂದಾಗಿ ಆಳವಾದ ತಗ್ಗು ದಿಣ್ಣೆಯಿಂದ ಕೂಡಿ ಅನುಪಯುಕ್ತವಾಗಿರುವ ಗ್ರಾಮ ಪಂಚಾಯತಿಯ ಸುಮಾರು 4 ಎಕರೆ ಕ್ಕಿಂತಲೂ ಹೆಚ್ಚು ವಿಶಾಲವಾದ ಜಾಗೆಯನ್ನು ಸಮತಟ್ಟು ಮಾಡಿ, ಅಲ್ಲಿ ಸುಸಜ್ಜಿತವಾದ ಮೈದಾನ ನಿರ್ಮಿಸುವ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳೊಂದಿಗೆ ಕಾಮಗಾರಿ ಕೈಗೊಳ್ಳುವ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಕಲ್ಲು ಮುಳ್ಳುಗಳಿಂದ ಹಾಗೂ ತಗ್ಗು ದಿಣ್ಣೆಯಿಂದ ಕೂಡಿರುವ ಗುಡ್ಡದಲ್ಲಿ ಜಾಗೆಯನ್ನು ಪರಿಶೀಲಿಸಿದರು.
ಈ ಗುಡ್ಡವನ್ನು ಸಮತಟ್ಟು ಮಾಡಿ ಮೈದಾನ ನಿರ್ಮಿಸಲು ಹಾಗೂ ಗುಡ್ಡದ ಮೇಲೆ ಇರುವ ಐತಿಹಾಸಿಕ ಹೆನ್ನೆಲೆಯ ಕಿಲ್ಲಾವನ್ನು ಆಧುನಿಕವಾಗಿ ಸಂರಕ್ಷಿಸುವ ಕಾಮಗಾರಿಗೆ ಸುಮಾರು 3 ಕೋಟಿ ರೂ.ಗಳ ಅಂದಾಜು ವೆಚ್ಚ ತಯಾರಿಸಲಾಗಿದ್ದು ಸಧ್ಯದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು. ಗ್ರಾಮದ ಶತಮಾನ ಕಂಡ ‘ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ’ಯಲ್ಲಿ ತಮ್ಮ ಅನುದಾನದಲ್ಲಿ ನಡೆಯುತ್ತಿರುವ ಶಾಲಾ ನವೀಕರಣ ಕಾಮಗಾರಿಯನ್ನು ವೀಕ್ಷಿಸಿದರು. ಜಿ.ಪಂ.ಸದಸ್ಯ ಕಲ್ಲಪ್ಪ ಪುಡಕಲಕಟ್ಟಿ, ಗ್ರಾ.ಪಂ.ಅಧ್ಯಕ್ಷ ಮಹಾವೀರ ಅಷ್ಟಗಿ, ತಾ.ಪಂ.ಮಾಜಿ ಸದಸ್ಯ ಬಾಬಾಮೊಯುದ್ದೀನ ಚೌಧರಿ, ಮಂಜುನಾಥ ಸಂಕಣ್ಣವರ, ಪರಮೇಶ್ವರ ದೊಡವಾಡ, ಇಮಾಮಹುಸೇನ ಮುಜಾವರ, ವೀರಣ್ಣ ಜವಳಿಮಠ, ಬಸೀರಹ್ಮದ ಮಾಳಗಿಮನಿ ಉಪಸ್ಥಿತರಿದ್ದರು.

loading...