ಶಾಸಕರ ವಿರುದ್ಧ ಆಪಾದನೆ ಸರಿಯಲ್ಲ: ನಾಯ್ಕ

0
14
loading...

ಕನ್ನಡಮ್ಮ ಸುದ್ದಿ-ಕುಮಟಾ: ಬಿಜೆಪಿಗರು ಮಾಡಿದ ಸ್ವಯಂಕೃತ ಅಪರಾಧಕ್ಕೆ ಶಾಸಕರನ್ನು ಹೊಣೆ ಮಾಡುವುದು ಮತ್ತು ಅವರ ವಿರುದ್ಧ ಇಲ್ಲಸಲ್ಲದ ಆಪಾದನೆ ಮಾಡುವುದು ಸರಿಯಲ್ಲ. ಹಸುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಕರ್ಕಿಯಲ್ಲಿ ತಡೆದು ಸಾಗಾಟಗಾರರ ಮೇಲೆ ಹಲ್ಲೆ ನಡೆಸಿ ಪ್ರಕರಣಕ್ಕೆ ಗುರಿಯಾಗಿದ್ದು, ಇದರಲ್ಲಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರ ಕುಮ್ಮಕ್ಕಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿರುವುದನ್ನು ಕುಮಟಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿ ಎಲ್‌ ನಾಯ್ಕ ತೀವ್ರವಾಗಿ ಖಂಡಿಸಿದ್ದಾರೆ.
ಅವರು ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿ, ಶಾಸಕಿ ಶಾರದಾ ಮೋಹನ ಶೆಟ್ಟಿ ಅವರು ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವುದನ್ನು ಸಹಿಸಲಾಗದ ಕೆಲ ಬಿಜೆಪಿಗರು ಶಾಸಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಕರ್ಕಿಯಲ್ಲಿ ಅಕ್ರಮವಾಗಿ ಹಸುಗಳ ಸಾಗಾಟದ ಪ್ರಕರಣ ಶಾಸಕರಿಗೆ ಗೊತ್ತೇ ಇಲ್ಲ. ಘಟನೆ ನಡೆದ ಮರುದಿನ ಪತ್ರಿಕೆಗಳಲ್ಲಿ ಸುದ್ದಿ ನೋಡಿದ ಮೇಲೆ ಗೊತ್ತಾಗಿದೆ.
ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ತಾರಾ ಗೌಡ ಮಾತನಾಡಿ, ಶಾಸಕಿ ಶಾರದಾ ಶೆಟ್ಟಿ ಅವರು ಒಬ್ಬ ಮಹಿಳೆಯಾಗಿ 5 ವರ್ಷಗಳಲ್ಲಿ ಅವರ ಅಭಿವೃದ್ಧಿ ಕೆಲಸಗಳು ಜನರು ಗುರುತಿಸಿದ್ದಾರೆ. ಬಿಜೆಪಿಯ ಅನಂತಕುಮಾರ ಹೆಗಡೆ ಎಂ ಪಿ ಆದ ಮೇಲೆ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು ಜನರಿಗೆ ಗೊತ್ತಿಲ್ಲವೇ. ಎಷ್ಟೇ ಆರೋಪ ಮಾಡಿದರೂ ಶಾಸಕರ ಜನಪ್ರೀಯತೆ ಕುಗ್ಗಿಸಲು ಸಾಧ್ಯವಿಲ್ಲ. ಅಭಿಪ್ರಾಯ, ಟೀಕೆ ಟಿಪ್ಪಣಿಗಳಿಗೆ ಒಂದು ಮಿತಿ ಇರುತ್ತದೆ. ಶಾಸಕರ ವಿರುದ್ದ ಸುಳ್ಳು ಆಪಾದನೆ ಮಾಡಿದ್ದಕ್ಕಾಗಿ ಬಿಜೆಪಿ ಮುಖಂಡರು ಕ್ಷಮೆಯಾಚಿಸದಿದ್ದಲ್ಲಿ ಮಹಿಳಾ ಘಟಕದಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ತಾಲೂಕಾ ಮಹಿಳಾ ಘಟಕಾಧ್ಯಕ್ಷೆ ಸುರೇಖಾ ವಾರಿಕರ್‌, ಪುರಸಭೆ ಸದಸ್ಯರಾದ ಅನಿತಾ ಮಾಪಾರಿ, ವಿನಯಾ ಜಾರ್ಜ್‌, ಗಣಪತಿ ಶೆಟ್ಟಿ, ಅಳಕೋಡ ಗ್ರಾ ಪಂ ಅಧ್ಯಕ್ಷ ಕೃಷ್ಣಾನಂದ ವೆರ್ಣೆಕರ್‌, ಹೊಲನಗದ್ದೆ ಗ್ರಾ ಪಂ ಅಧ್ಯಕ್ಷ ರಾಘವೇಂದ್ರ ಪಟಗಾರ, ಪ್ರಮುಖರಾದ ಎಂ ಟಿ ನಾಯ್ಕ, ಸಚಿನ್‌ ನಾಯ್ಕ, ಕೆರೋಲಿನ್‌ ಫರ್ನಾಂಡಿಸ್‌, ನಾಗರಾಜ ನಾಯ್ಕ, ಮಂಜುನಾಥ ಗೌಡ, ರವಿ ಗೌಡ, ಅಮರನಾಥ ಶೆಟ್ಟಿ ಹಾಗೂ ತಾಲೂಕಿನ ವಿವಿಧ ಗ್ರಾ ಪಂ ಗಳ ಅಧ್ಯಕ್ಷರು, ಉಪಾಧ್ಯಕ್ಷರು ಉಪಸ್ಥಿತರಿದ್ದರು.

loading...