ಶಿಕ್ಷಣ ಕೇವಲ ಉಳ್ಳವರ ಸ್ವತ್ತಾಗಬಾರದು: ಶಾಸಕ ಹೆಬ್ಬಾರ

0
27
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಶಿಕ್ಷಣ ಕೇವಲ ಉಳ್ಳವರ ಸ್ವತ್ತಾಗಬಾರದೆಂಬ ಚಿಂತನೆಯ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿಯೊಬ್ಬ ಮಗುವಿಗೆ ಶಿಕ್ಷಣ ದೊರಕಿಸುವ ಉದ್ದೇಶದಿಂದ ಅನೇಕ ಉಚಿತ ಯೋಜನೆಗಳನ್ನು ಅನುಷ್ಟಾನಗೊಳಿಸಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ತಾಲೂಕಿನ ಗಡಿ ಭಾಗದ ಕಂಚಿಕೊಪ್ಪ ಸ.ಹಿ.ಪ್ರಾ ಶಾಲೆಯ ಸುವರ್ಣ ಸಂಭ್ರಮ, ಶೈಕ್ಷಣಿಕ ಉತ್ಸವ, ಇ-ಕಲಿಕಾ ಕೊಠಡಿ, ವಾರ್ಷಿಕೋತ್ಸವ ಉದ್ಘಾಟಿಸಿ; ಶಾಲಾಭಿವೃದ್ಧಿ ಸಮಿತಿಯ ಮಾಜಿ ಮತ್ತು ಹಾಲಿ ಅಧ್ಯಕ್ಷರನ್ನು, ಶಾಲೆಯಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು. ಇಂದಿನ ಶಿಕ್ಷಣ ಪದ್ದತಿಗೂ, ಹಿಂದಿನ ಪದ್ದತಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಅಂದಿನ ಕಷ್ಟಕಾಲದಲ್ಲಿ ಹಿರಿಯರು ಮುಂದಾಲೋಚನೆಯಿಂದಾಗಿ ಕಟ್ಟಿ ಬೆಳೆಸಿದ ವಿದ್ಯಾಸಂಸ್ಥೆಗಳ ಮೂಲಕ ಅಸಂಖ್ಯಾತ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದರು.
ಸಮಾಜದ ಉಳಿದೆಲ್ಲ ಕ್ಷೇತ್ರಗಳಿಗಿಂತ ಪಾವಿತ್ರ್ಯವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಶೈಕ್ಷಣಿಕ ಕ್ಷೇತ್ರ ತನ್ನ ಘನತೆಯನ್ನು ಮತ್ತಷ್ಟು ದೃಢಗೊಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಗ್ರಾ.ಪಂ ಸದಸ್ಯರಾದ ಶಾರದಾ ದೇವಗಿರಿ, ಚಂದ್ರಶೇಖರ ಜೈನ್‌, ತಾ.ಪಂ ಸದಸ್ಯೆ ರೇಣುಕಾ, ಪ್ರಾ.ಶಾ.ಶಿ ಸಂಘದ ತಾಲೂಕಾಧ್ಯಕ್ಷ ಪ್ರದೀಪ ಕುಲಕರ್ಣಿ, ಕುಂದರಗಿ ಗ್ರಾ.ಪಂ ಸದಸ್ಯ ನಾರಾಯಣ ಚಿಪಗೇರಿ ಮತ್ತಿತರರು ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳ ನಾಡಗೀತೆ, ಪ್ರಾರ್ಥನೆ, ಸ್ವಾಗತ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ರಮೇಶರಾವ್‌ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಶಿಕ್ಷಕಿ ಗೀತಾ ಹೆಗಡೆ ವರದಿ ವಾಚಿಸಿದರು. ಎಸ್‌.ಡಿ.ಎಂ.ಸಿ ಅಧ್ಯಕ್ಷ ಮಂಜಯ್ಯ ಜೈನ್‌ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಶಾಲೆಯ ಹಳೆಯ ಮತ್ತು ಹಾಲಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

loading...