ಸರಕಾರದ ಯೋಜನೆಗಳು ಅನುಷ್ಠಾನವಾಗಬೇಕು: ಬಣಕಾರ

0
15
loading...

ಹಿರೇಕೆರೂರ: ಮಹಿಳೆಯರು ಎಲ್ಲ ಕ್ಷೇತ್ರದಲ್ಲಿಯೂ ಮುಂದೆ ಬಂದರೆ ದೇಶ ಅಭಿವೃದ್ಧಿ ಹೊಂದುತ್ತದೆ. ಸರಕಾರದ ಯೋಜನೆಗಳು ಕಾಗದದಲ್ಲಿ ಉಳಿಯದೇ ಅನುಷ್ಠಾನವಾಗಬೇಕಾದರೆ, ಜನಪ್ರತಿನಿಧಿಗಳ ಅಧಿಕಾರ ಕರ್ತವ್ಯ ಮುಖ್ಯವಾಗಿರುತ್ತದೆ. ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಕ್ರೀಯವಾಗಿ ಕೆಲಸಮಾಡಿದರೆ ರಾಮ ರಾಜ್ಯದ ಕನಸು ನೆನಸಾಗುತ್ತದೆ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.
ಅವರು ತಾಲೂಕಿನ ಸಣ್ಣಗುಬ್ಬಿ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ನಿರ್ಮಿಸಿದ ಮಹಿಳಾ ಸಂಜೀವಿನಿ ಶೆಡ್‌(ಕಟ್ಟಡ)ವನ್ನು ಉದ್ಘಾಟನೆ, ಶುದ್ಧಕುಡಿಯುವ ಘಟಕ ಉದ್ಘಾಟನೆ ನೇರವೇರಿಸಿ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದರು.
ಯಾವುದೇ ಒಂದು ಕಾರ್ಯಗಳು ಆಗಬೇಕಾದರೆ ಆಸಕ್ತಿ ಬೇಕಾಗುತ್ತದೆ. ನರೇಗಾ ಯೋಜನೆಯಲ್ಲಿ ಸಂಜೀವಿನಿ ಶೆಡ್‌ ನಿರ್ಮಾಣಕ್ಕೆ ಅವಕಾಶ ಸಿಕ್ಕಾಗಿ ಕಡೂರು ಗ್ರಾ.ಪಂ.ವ್ಯಾಪ್ತಿಯ ಗ್ರಾ.ಪಂ.ಸದಸ್ಯ ದೇವರಾಜ ನಾಗಣ್ಣನವರ ಆಸಕ್ತಿವಹಿಸಿ ತ್ವರಿತಗತಿಯಲ್ಲಿ ಕಟ್ಟಡ ನಿರ್ಮಿಸುವುದರಲ್ಲಿ ಶ್ರಮವಹಿಸಿದ ಕಾರಣ ಇಂದು ರಾಜ್ಯದಲ್ಲಿಯೇ ಪ್ರಥಮ ಮಹಿಳಾ ಸಂಜವೀನಿ ಶೆಡ್‌ ನಿರ್ಮಾಣವಾಗಿ ಉದ್ಘಾಟನೆಗೊಳುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.
ಹಿರೇಕೆರೂರು ತಾಲೂಕು ನರೇಗಾ ಯೋಜನೆಯಲ್ಲಿ 40 ಕೋಟಿ ಉಪಯೋಗ ಮಾಡಿಕೊಂಡು ರಾಜ್ಯದಲ್ಲಿ 10 ಸ್ಥಾನಪಡೆದಿದೆ. ರೋಗಗಳ ಮೂಲ ನೀರು ನೀರಿನಿಂದ ಅನೇಕ ರೋಗ,ರುಜಿನಗಳು ಬರುತ್ತವೆ. ಹಾಗಾಗಿ ಪ್ರತಿಯೊಂದು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸುವುದಕ್ಕೆ ಮುಂದಾಗಿದ್ದು, ಈಗಾಗಲೇ 100 ಕ್ಕೂ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕವನ್ನು ಪ್ರಾರಂಭಿಸಲಾಗಿದೆ. ರಾಜ್ಯಸಭಾ ಸದಸ್ಯರ ಅನುದಾನದಲ್ಲಿ ಸಣ್ಣಗುಬ್ಬಿ ಗ್ರಾಮದ ಯೋಗಿ ನಾರಾಯಣ ಸಮುದಾಯ ಭವನಕ್ಕೆ 5 ಲಕ್ಷ, ಮೈಲಾರಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ 3 ಲಕ್ಷ ಅನುದಾನ ಒದಗಿಸಿಕೊಡುವುದಾಗಿ ಹೇಳಿದರು.
ಗ್ರಾ.ಪಂ.ಸದಸ್ಯ ದೇವರಾಜ ನಾಗಣ್ಣನವರ ಮಾತನಾಡಿ, ಮನೆಯ ಆಧಾರ ಹೆಣ್ಣು ಮಕ್ಕಳು, ಅವರು ಸರಿಯಾದ ಶಿಕ್ಷಣಪಡೆದರೆ ಏನನ್ನಾದರೂ ಸಾಧಿಸಬಹುದು. ಹೆಣ್ಣು ಮಕ್ಕಳು ಆರ್ಥಿಕವಾಗಿ ಮುಂದೆ ಬಂದರೆ ದೇಶ ಅಭಿವೃದ್ಧಿ ಹೊಂದುತ್ತದೆ. ಮಹಿಳಾ ಸಂಜೀವಿನಿ ಶೆಡ್‌ ನಿರ್ಮಾಣವಾಗಿರುವುದರಿಂದ ಗ್ರಾಮದಲ್ಲಿರುವ ಹೆಣ್ಣು ಮಕ್ಕಳು ಸಂಘದ ಕಾರ್ಯಗಳನ್ನು ನಡೆಸುವುದಕ್ಕೆ ಅನುಕೂಲವಾಗಿದೆ. ಇದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕೆಂದು ಹೇಳಿದರು.
ತಾ.ಪಂ.ಅಧ್ಯಕ್ಷ ಹೇಮಣ್ಣ ಮುದರಡ್ಡೇರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿವೆ. ಮಹಿಳೆಯರು ಯೋಜನೆಗಳನ್ನು ಸದುಪಯೋಗಮಾಡಿಕೊಂಡು ಜೀವನದಲ್ಲಿ ಮುಂದೆ ಬರಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷೆ ಲೀಲಾವತಿ ಕರೇಗೌಡ್ರ, ತಾ.ಪಂ.ಅಧ್ಯಕ್ಷ ಎಚ್‌.ಡಿ.ಮುದರಡ್ಡೇರ, ದೇವರಾಜ ನಾಗಣ್ಣನವರ, ಎನ್‌.ಎಚ್‌.ಮಕರಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಿಡಿಒ ನಾಗರತ್ನಾ ಮುದ್ದಪ್ಪಳವರ, ಕೆಎಂಎಫ್‌ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಗ್ರಾ.ಪಂ.ಸದಸ್ಯ ನಟರಾಜ ನಂದಿಹಳ್ಳಿ, ಸುನಂದಮ್ಮ ಮಡಿವಾಳರ, ರುದ್ರಪ್ಪ ದೊಡ್ಡಕ್ಕಳವರ, ನಾರಾಯಣಪ್ಪ ನಾಗಣ್ಣನವರ, ಕೃಷ್ಣಪ್ಪ ದಾಸರ, ಬಸವಂತಪ್ಪ ಬಸಾಪುರ, ನಾರಾಯಣಪ್ಪ ಪವಾರ, ಹನುಮಂತಪ್ಪ ಬಳಿಗಾರ, ಮಹಿಳಾ ಸಂಘದ ಪ್ರತಿನಿಧಿಗಳು ಮತ್ತಿತರರು ಭಾಗವಹಿಸಿದ್ದರು.
ಪಿಡಿಒ ನಾಗರತ್ನಾ ಮುದ್ದಪ್ಪಳವರ ಸ್ವಾಗತಸಿದರು.

loading...