ಸ್ವ ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ

0
23
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ಶ್ರೀ. ಕ್ಷೇತ್ರ. ದ. ಗ್ರಾ ಯೋಜನೆಯ ದಾಂಡೇಲಿ ಯೋಜನಾ ಕಚೇರಿ ಆಶ್ರಯದಲ್ಲಿ ಸ್ಥಳೀಯ ಮಾರುತಿ ನಗರದ ಸಮುದಾಯ ಭವನದಲ್ಲಿ ಯೋಜನೆಯ ವಿವಿಧ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಿಸುವ ಕಾರ್ಯಕ್ರಮವು ಬುಧವಾರ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಸಂದೇಶ್‌.ಎಸ್‌.ಜೈನ್‌ ಅವರು ಇಡೀ ವಿಶ್ವದಲ್ಲೆ ನಷ್ಟವನ್ನೆ ಕಾಣದ ಮತ್ತು ಲಾಭದಲ್ಲಿರುವ ವ್ಯವಸ್ಥೆಯೆ ಸ್ವಸಹಾಯ ಸಂಘಗಳು ಮುಂಚೂಣಿಯಲ್ಲಿ ನಿಲ್ಲುತ್ತವೆ. ವಿಶೇಷವಾಗಿ ಶ್ರೀ.ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಸ್ವಸಹಾಯ ಸಂಘಗಳ ಮೂಲಕ ದುರ್ಬಲರನ್ನು, ಅಶಕ್ತರನ್ನು, ಬಡವ ಬಲ್ಲಿದರನ್ನು ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ಸಂಘಟಿಸಿಕೊಂಡು ಸ್ವಸಹಾಯ ಸಂಘಗಳನ್ನು ಪ್ರವರ್ತಿಸುವುದರ ಮೂಲಕ ಅವರುಗಳನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರುತ್ತಿರುವ ಸಾಹಸಿಕ ಶ್ರಮ ಶ್ಲಾಘನೀಯ. ಸ್ವಸಹಾಯ ಸಂಘಗಳ ಮೂಲಕ ವಾರ ವಾರ ತುಂಬಿದ ಉಳಿತಾಯವೆ ಮುಂದೆ ದೊಡ್ಡ ಮೊತ್ತವಾಗಿ ಅದನ್ನೆ ಸಂಘದ ಸದಸ್ಯರಾಗಿ ನಿಗದಿತ ಬಡ್ಡಿ ಆಕರಣೆ ಮಾಡಿ ಸಾಲ ನೀಡುವುದರ ಮೂಲಕ ಸದಸ್ಯರ ಏಳಿಗೆಯ ಜೊತೆಗೆ ಸಂಘದ ಏಳಿಗೆಯಾಗುವುದರಿಂದ ಸ್ವಸಹಾಯ ಸಂಘಗಳು ಬಲವರ್ಧನೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಶ್ರೀ.ಧರ್ಮಸ್ಥಳ ಸಂಸ್ಥೆಯೂ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಅಗ್ರಣೀಯ ಸ್ಥಾನದಲ್ಲಿ ನಿಲ್ಲುತ್ತದೆ ಎಂದರು.
ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ಹರೀಶ ಪಾವಸ್ಕರ್‌ ಮಾತನಾಡಿ ಯೋಜನೆಯ ಉದ್ದೇಶವನ್ನು ವಿವರಿಸಿ, ಲಾಭಾಂಶ ವಿತರಣೆಯ ಕುರಿತಾಗಿ ಮಾತನಾಡಿದರು. ವೇದಿಕೆಯಲ್ಲಿ ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷೆ ರೇಣುಕಾ ಉಪಸ್ಥಿತರಿದ್ದರು. ಧರ್ಮಸ್ಥಳ ಸಂಸ್ಥೆಯ ಸಿಬ್ಬಂದಿಗಳಾದ ಗೌರಮ್ಮ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಮಹಾದೇವಿ ವಂದಿಸಿದರು. ಮೇಲ್ವಿಚಾರಕ ಲೋಕೇಶ ಗೌಡ ನಿರೂಪಿಸಿದರು. ಒಟ್ಟು 35 ಸ್ವ ಸಹಾಯ ಸಂಘಗಳಿಗೆ ಲಾಭಾಂಶವನ್ನು ಚೆಕ್‌ ಮೂಲಕ ವಿತರಿಸಲಾಯಿತು.

loading...