ಅರ್ಬನ್ ಸಹಕಾರಿ ಬ್ಯಾಂಕ್ 4.22 ಕೋಟಿ ರೂ ಲಾಭ

0
25
loading...

ಕನ್ನಡಮ್ಮ ಸುದ್ದಿ-ಶಿರಸಿ: ಸಾವಿರ ಕೋಟಿ ರೂಪಾಯಿಗೂ ಮಿಕ್ಕಿ ವ್ಯವಹಾರ ನಡೆಸಿರುವ ಇಲ್ಲಿನ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ 4.22 ಕೋಟಿ ರೂಪಾಯಿ ನಿರ್ವಹಣಾ ಲಾಭ ಗಳಿಸಿದೆ.
ಸಹಕಾರಿ ಕ್ಷೇತ್ರದ ಇತಿಹಾಸದಲ್ಲಿ 112 ವರ್ಷಗಳನ್ನು ಪೂರೈಸಿದ, ಕರ್ನಾಟಕದ ಪಟ್ಟಣ ಸಹಕಾರಿ ಬ್ಯಾಂಕ್‍ಗಳಲ್ಲಿ ಒಂದಾಗಿರುವ, ಅರ್ಬನ್ ಬ್ಯಾಂಕ್, ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ, ಒಟ್ಟು ವ್ಯವಹಾರವನ್ನು 1000 ಕೋಟಿ ರೂ.ಗೆ ವೃದ್ಧಿಸಿ, ದಾಖಲೆ ನಿರ್ಮಿಸಿದೆ. ಬೆಳಗಾವಿ ವಿಭಾಗದ ಪಟ್ಟಣ ಸಹಕಾರ ಬ್ಯಾಂಕ್‍ಗಳಲ್ಲಿ, ಅಧಿಕ ವ್ಯವಹಾರ ನಡೆಸಿದ ಪ್ರಥಮ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ.ವಿ.ಎಸ್.ಸೋಂದೆ ತಿಳಿಸಿದ್ದಾರೆ.

ಬ್ಯಾಂಕಿನ ಒಟ್ಟು ಠೇವಣಿ 581 ಕೋಟಿ ರೂ.ನಿಂದ 646 ಕೋಟಿ ರೂ.ಗೆ ಏರಿಕೆಯಾಗಿದ್ದು, ಶೇ.11.19ರಷ್ಟು ವೃದ್ಧಿ ದಾಖಲಿಸಿದೆ. ಸಾಲ ಮತ್ತು ಮುಂಗಡಗಳು 310 ಕೋಟಿ ರೂ.ನಿಂದ 356 ಕೋಟಿಗೆ ಏರಿಕೆಯಾಗಿವೆ.
ರಾಜ್ಯದಲ್ಲಿರುವ ಒಟ್ಟು 266 ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿ ಪ್ರಥಮ 10 ಬ್ಯಾಂಕುಗಳಲ್ಲಿ ಒಂದು ಸ್ಥಾನವನ್ನು ಕಾಯ್ದುಕೊಂಡಿದೆ. ಸಾಲ ಮತ್ತು ಮುಂಗಡಗಳನ್ನು ನೀಡಲು ಹೆಚ್ಚಿನ ಸಂಪನ್ಮೂಲ ಹೊಂದಿರುವ ಬ್ಯಾಂಕ್, ಈ ಹೊಸ ಆರ್ಥಿಕ ವರ್ಷದಲ್ಲಿ ಸಾಲ ಮುಂಗಡಗಳ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಸ್ಪರ್ಧಾತ್ಮಕ ದರದಲ್ಲಿ ಬ್ಯಾಂಕಿನ ಸದಸ್ಯರು ಕಾರು ಸಾಲ (ಶೇ 8.25), ಗೃಹ ಸಾಲ (ಶೇ 8.95), ವ್ಯವಹಾರ, ಉದ್ದಿಮೆಗಳಿಗೆ ದುಡಿಯುವ ಬಂಡವಾಳಕ್ಕಾಗಿ (ಶೇ 9.95) ಸಾಲ ಮತ್ತು ಮುಂಗಡಗಳನ್ನು ಪಡೆಯುವ ಮೂಲಕ ಗ್ರಾಹಕರು, ಬ್ಯಾಂಕಿನ ಆರ್ಥಿಕ ಅಭಿವೃದ್ಧಿಗೆ ಕಾರಣರಾಗಬೇಕು ಎಂದು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾಂಡುರಂಗ ಪೈ ವಿನಂತಿಸಿದ್ದಾರೆ.

loading...